ನವದೆಹಲಿ: ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಬಹುದಾದ ಚೀನಾ ಕಂಡುಹಿಡಿದಿರುವ ಸ್ಟ್ರಾಡೆಲ್ ಬಸ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಕರ್ಷಿಸಿದೆ.
ಚೀನಾದಲ್ಲಿ ಪರೀಕ್ಷಾರ್ಥ ಸಂಚಾರ ನಡೆಸಿರುವ ಸ್ಟ್ರಾಡೆಲ್ ಬಸ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ರಸ್ತೆ ಸಾರಿಗೆ ಅಧಿಕಾರಿಗಳ ಸಭೆಯಲ್ಲಿ ಪ್ರಸ್ತಾಪಿಸಿದ್ದು ಭಾರತದ ಕಿಕ್ಕಿರಿದ ರಸ್ತೆಗಳಲ್ಲಿ ಸ್ಟ್ರಾಡೆಲ್ ಬಸ್ ಬಳಕೆ ಸಾಧ್ಯವೇ ಎಂಬುದರ ಬಗ್ಗೆ ಗರಿಷ್ಠ ಮಾಹಿತಿಯನ್ನು ಸಂಗ್ರಹಿಸಲು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ.
ಕಳೆದ ವಾರ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚೀನಾದ ಸ್ಟ್ರಾಡೆಲ್ ಬಸ್ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದ್ದು, ಭಾರತವಷ್ಟೇ ಅಲ್ಲದೆ ಬ್ರೆಜಿಲ್ ಹಾಗು ಇಂಡೋನೇಷ್ಯಾ ಸಹ ಚೀನಾದ ಸ್ಟ್ರಾಡೆಲ್ ಬಸ್ ಬಗ್ಗೆ ಆಸಕ್ತಿ ತೋರಿವೆ.
ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿದ್ದಾಗ ಬೇರೆ ದೇಶಗಳ ವಿನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿರುವ ಉದಾಹರಣೆಗಳಿದ್ದು, ಸಾಕ್ಷ್ಯಚಿತ್ರದಲ್ಲಿ ನೋಡಿದ್ದ ಹೈಡ್ರಾಲಿಕ್ ಯಂತ್ರಗಳನ್ನು ಅಳವಡಿಸಿಕೊಳ್ಳುವಂತೆ ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದರು. ನರೇಂದ್ರ ಮೋದಿ ಅವರ ಸೂಚನೆಯಂತೆ ಕೆನಡಾದಿಂದ ಹೈಡ್ರಾಲಿಕ್ ಯಂತ್ರಗಳನ್ನು ತರಿಸಿಕೊಳ್ಳಲಾಗಿತ್ತು.
ಚೀನಾ ಕಂಡು ಹಿಡಿದಿರುವ ಬೃಹತ್ ಗಾತ್ರದ ಸ್ಟ್ರಾಡೆಲ್ ಬಸ್ ರೈಲಿನ ಮಾದರಿಯಲ್ಲಿ ಟ್ರ್ಯಾಕ್ ಮೇಲೆ ಸಂಚರಿಸಲಿದ್ದು 1,400 ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಗಂಟೆಗೆ ಸುಮಾರು 60 ಕಿಮಿ ವೇಗದಲ್ಲಿ ಸಂಚರಿಸುವ ಈ ವಾಹನದ ಕೆಳಗೆ ಕಾರ್, ದ್ವಿಚಕ್ರ ವಾಹನಗಳೂ ಸಂಚರಿಸಬಹುದಾಗಿರುವುದು ಸ್ಟ್ರಾಡೆಲ್ ಬಸ್ ನ ಮತ್ತೊಂದು ವಿಶೇಷತೆಯಾಗಿದೆ. ಸ್ಟ್ರಾಡೆಲ್ ಬಸ್ ನ್ನು ಚೀನಾ ಈಗಾಗಲೇ ಉತ್ತರ ಚೀನಾದಲ್ಲಿ ಪರೀಕ್ಷಾರ್ಥವಾಗಿ ಚಾಲನೆ ಮಾಡಿದ್ದು, ವಿದ್ಯುತ್ ಚಾಲಿತ ಬಸ್ ಆಗಿರುವ ಸ್ಟ್ರಾಡೆಲ್ ಬಸ್ 22 ಮೀಟರ್ ಉದ್ದವಿದ್ದು 7.8 ಮೀಟರ್ ಅಗಲವಿದ್ದು ಇದನ್ನು ಲ್ಯಾಂಡ್ ಏರ್ ಬಸ್ ಅಂತಲೂ ಕರೆಯಲಾಗುತ್ತದೆ.