ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲೇ ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲಿಖೋ ಪಲ್ ಅವರು ಮಂಗಳವಾರ ನಿಗೂಢವಾಗಿ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಪುಲ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ ಮತ್ತು ಇದಕ್ಕೆ ಪುಷ್ಠಿ ನೀಡುವಂತೆ ಮಾಜಿ ಮುಖ್ಯಮಂತ್ರಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಮಾತನಾಡಿದ್ದರು. ತೀವ್ರ ಬಡತನದಿಂದ ಬಂದಿದ್ದ ಪುಲ್ ಅವರು ಇತ್ತೀಚಿಗೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ನಂತರ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಅಲ್ಲದೆ ತಾವು ಏನನ್ನೂ ಸಾಧಿಸಲಿಲ್ಲ ಎಂಬ ನೋವಿನಿಂದ ಇಂತಹ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಬಳಲುತ್ತಿದ್ದ ಪುಲ್, ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ನಾಲ್ಕು ತಿಂಗಳ ಹಿಂದಷ್ಟೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಿದ್ದರು. ಕಾಂಗ್ರೆಸ್ ಬಂಡಾಯ ಶಾಸಕರು ಹಾಗೂ ಬಿಜೆಪಿ ಸದಸ್ಯರ ಬಲದಿಂದ ಮುಖ್ಯಮಂತ್ರಿಯಾಗಿದ್ದರು. ಆದರೆ ಬಂಡಾಯ ಶಾಸಕರು ತಮ್ಮ ಬೆಂಬಲ ಹಿಂಪಡೆದ ಪರಿಣಾಮ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕಾಗಿ ಬಂದಿತ್ತು.
ಅಂಜಾವ್ ಜಿಲ್ಲೆಯ ಹವಾಯಿ ಸರ್ಕಲ್ ನ ವಲ್ಲಾ ಗ್ರಾಮದಲ್ಲಿ ಜನಿಸಿದ್ದ ಕಲಿಖೋ ಪುಲ್ ಅವರು ಒಬ್ಬ ಕಾರ್ಪೆಂಟರ್ ಹಾಗೂ ಚೌಕಿದಾರನಾಗಿ, ಬಳಿಕ ಅರುಣಾಚಲ ಪ್ರದೇಶ ಮುಖ್ಯಮಂತ್ರಿಯಾಗಿದ್ದರು. ಆದರೆ ತುಂಬಾ ಕೆಳ ಹಂತದಿಂದ ಬೆಳೆದು ಬಂದಿದ್ದ ಪುಲ್ ಅವರ ಜೀವನ ಈ ರೀತಿ ಅಂತ್ಯಗೊಂಡಿರುವುದು ಮಾತ್ರ ದುರದೃಷ್ಟಕರ.
'ನಾನು ನಿತ್ಯ ಶಾಲೆಗೆ ಹೋಗುತ್ತಿರಲಿಲ್ಲ. ಏಕೆಂದರೆ ನಿತ್ಯ ಕಾಡಿಗೆ ಹೋಗಿ ಮನೆಗೆ ಉರುವಲು ಕಟ್ಟಿಗೆ ತರುತ್ತಿದ್ದೇನು. ನನಗೆ 10 ವರ್ಷವಿದ್ದಾಗ ಹವಾಯಿ ಕ್ರಾಫ್ಟ್ ಸೆಂಟರ್ ನಲ್ಲಿ ಎರಡು ವರ್ಷಗಳ ಕಾರ್ಪೆಂಟರ್ ತರಬೇತಿ ಪಡೆಯುತ್ತಿದ್ದೆ. ಈ ವೇಳೆ ನನಗೆ ಗೌರವ ಧನವಾಗಿ ನಿತ್ಯ50 ರುಪಾಯಿ ನೀಡುತ್ತಿದ್ದರು. ತರಬೇತಿಯ ನಂತರ ನಾನು ಅಲ್ಲಿಯೇ 96 ದಿನಗಳ ಕಾಲ ಶಿಕ್ಷಕನಾಗಿ ಕೆಲಸ ಮಾಡುವ ಅವಕಾಶ ಪಡೆದಿದ್ದೆ ಎಂದು ಪುಲ್ ಅವರು ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದ ವೇಳೆ ತಮ್ಮ ಬಾಲ್ಯವನ್ನು ನೆನಪು ಮಾಡಿಕೊಂಡಿದ್ದರು.