ಚೆನ್ನೈ: ಸುಮಾರು ಮೂರು ದಶಕಗಳ ಒಪ್ಪಂದದ ನಂತರ ರಷ್ಯಾದ ಸಹಯೋಗದೊಂದಿಗೆ ತಮಿಳುನಾಡಿನ ಕೂಡಂಕುಳಂನಲ್ಲಿ ಸ್ಥಾಪಿಸಲಾಗಿರುವ ಅಣು ವಿದ್ಯುತ್ ಸ್ಥಾವರದ ಮೊದಲ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಅವರು ಜಂಟಿಯಾಗಿ ಬುಧವಾರ ದೇಶಕ್ಕೆ ಸಮರ್ಪಿಸಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಮೂವರು ನಾಯಕರು ಅಣು ವಿದ್ಯುತ್ ಸ್ಥಾವರದ ಮೊದಲ ಘಟಕವನ್ನು ಇಂದು ಲೋಕಾರ್ಪಣೆ ಮಾಡಿದರು. ವದೆಹಲಿಯಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಅವರು ಪ್ರಧಾನಿ ಅವರಿಗೆ ಸಾಥ್ ನೀಡಿದ್ದರು. ಮಾಸ್ಕೋ ಕಚೇರಿಯಲ್ಲಿ ಪುಟಿನ್ ಕುಳಿತಿದ್ದರು, ಜಯಲಲಿತಾ ಅವರು ಚೆನ್ನೈನ ಸೆಕ್ರಟರಿಯೇಟ್ ನಲ್ಲಿ ಹಾಜರಿದ್ದರು.
ಲೋಕಾರ್ಪಣೆ ಮಾಡಿ ಮಾತನಾಡಿದ ಮೋದಿ, ಸ್ವಚ್ಛ ಇಂಧನ ಉತ್ಪಾದನೆ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನ ಭಾರತದ ಪ್ರಯತ್ನಗಳಿಗೆ ಕೂಡಂಕುಳಂ 1 ಅಣು ವಿದ್ಯುತ್ ಸ್ಥಾವರವು ಮಹತ್ವದ ಸೇರ್ಪಡೆ ಎಂದರು. ಅಲ್ಲದೆ ಭಾರತ – ರಷ್ಯಾ ಮೈತ್ರಿ ದೀರ್ಘಕಾಲೀನದ್ದಾಗಲಿ ಎಂದು ಪ್ರಧಾನಿ ಹಾರೈಸಿದರು.
ಚೀನಾದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ನಿಮ್ಮ ಭೇಟಿಯನ್ನು ನಾನು ಎದುರು ನೋಡುತ್ತಿದ್ದೇನೆ. ಇಂದಿನ ಸಮಾರಂಭ ಭಾರತ ಮತ್ತು ರಷ್ಯಾದ ಇಂಜಿನಿಯರ್ಗಳ ತಂಡಕ್ಕೆ ಅತ್ಯಂತ ಹರ್ಷದ ಸಂದರ್ಭ. ಅವರ ಅವಿರತ ಶ್ರಮಕ್ಕೆ ನಾನು ನಮಸ್ಕರಿಸುತ್ತೇನೆ. ಕೂಡಂಕುಳಂ ಅಣು ವಿದ್ಯುತ್ ಘಟಕದ ಉದ್ಘಾಟನೆಯು ಭಾರತ- ರಷ್ಯಾ ಬಾಂಧವ್ಯಕ್ಕೆ ಇನ್ನೊಂದು ಕೊಂಡಿಯಾಗಲಿದೆ ಎಂದು ಪ್ರಧಾನಿ ಹೇಳಿದರು.