ಮದುರೈ: ಉಚ್ಚಾಟಿತ ಎಐಎಡಿಎಂಕೆ ನಾಯಕಿ ಶಶಿಕಲಾ ಪುಷ್ಪ ಹಾಗೂ ಅವರ ಪತಿ ಮತ್ತು ಪುತ್ರನ ವಿರುದ್ಧ ಪೊಲೀಸರು ಲೈಂಗಿಕ ಕಿರುಕುಳದ ಕೇಸ್ ದಾಖಲಿಸಿದ್ದಾರೆ.
ಸಂಸದೆ ಶಶಿಕಲಾ ಹಾಗೂ ಅವರ ಪತಿ ಲಿಂಗೇಶ್ವರ ಮತ್ತು ಪುತ್ರ ಎಲ್ ಪ್ರದೀಪ್ ರಾಜ ಅವರ ವಿರುದ್ಧ ಈ ಹಿಂದೆ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಅಕ್ರಮ ಗೃಹ ಬಂಧನ ಹಾಗೂ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
ಮಹಿಳೆಯ ದೂರು ಆಧರಿಸಿ ಟುಟಿಕೋರಿನ್ ಜಿಲ್ಲೆಯ ಪುದುಕೊಟ್ಟಾಯಿ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಸಂಸದೆ ಹಾಗೂ ಅವರ ಪತಿ, ಪುತ್ರನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
2011ರಿಂದ 2014ರವರೆಗೆ ಶಶಿಕಲಾ ಅವರು ಟುಟಿಕೋರಿನ್ ಮೇಯರ್ ಆಗಿದ್ದ ವೇಳೆ ತಾನು ಮತ್ತು ತನ್ನ ಸಹೋದರಿ ಇಬ್ಬರೂ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದೇವು. ಈ ವೇಳೆ ನಮಗೆ ಗೃಹ ಬಂಧನ ವಿಧಿಸಲಾಗಿತ್ತು ಮತ್ತು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಎಂಕೆ ಸಂಸದ ತಿರುಚಿ ಎನ್ ಶಿವ ಅವರಿಗೆ ಕಪಾಳಮೋಕ್ಷ ಮಾಡಿದ್ದ ಶಶಿಕಲಾ ಅವರನ್ನು ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಅವರು ಪಕ್ಷದಿಂದ ಉಚ್ಚಾಟಿಸಿದ್ದರು.