ದೇಶ

ರೈಲಿನ ತಪ್ಪು ವೇಳಾಪಟ್ಟಿ ನೀಡಿದ್ದಕ್ಕಾಗಿ ಪ್ರಯಾಣಿಕನಿಗೆ ಪರಿಹಾರ ನೀಡಲು ರೈಲ್ವೆ ನಿಗಮಕ್ಕೆ ಆದೇಶ

Sumana Upadhyaya
ಥಾಣೆ: ರೈಲಿನ ವೇಳಾಪಟ್ಟಿಯನ್ನು ತಪ್ಪಾಗಿ ನೀಡಿ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡಿದ್ದಕ್ಕಾಗಿ ಥಾಣೆಯ ನಿವಾಸಿಯೊಬ್ಬರಿಗೆ 7 ಸಾವಿರ ರೂಪಾಯಿ ಪರಿಹಾರ, ಆರ್ ಟಿಐಯಡಿ ಕೇಳಿದ ಪ್ರಶ್ನೆಯ ವೆಚ್ಚ ಮತ್ತು ಟಿಕೆಟ್ ದರ ನೀಡಬೇಕೆಂದು ಗ್ರಾಹಕ ನ್ಯಾಯಾಲಯ ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ನಿಗಮಕ್ಕೆ ಆದೇಶ ನೀಡಿದೆ.
ಐಆರ್ ಸಿಟಿಸಿ, ಭಾರತೀಯ ರೈಲ್ವೆಯ ಒಂದು ಅಂಗಸಂಸ್ಥೆಯಾಗಿದ್ದು, ರೈಲುಗಳಲ್ಲಿ ಆಹಾರ, ಪ್ರವಾಸೋದ್ಯಮ ಮತ್ತು ಆನ್ ಲೈನ್ ಟಿಕೆಟ್ ನಿರ್ವಹಣೆ ವ್ಯವಸ್ಥೆಯನ್ನು ನಡೆಸುತ್ತದೆ. 
ನವಿ ಮುಂಬೈಯ ನಿವಾಸಿ ಗೋಪಾಲ್ ಬಂಕಟ್ಲಲ್ಜಿ ಬಜಾಜ್, ಐಆರ್ ಸಿಟಿಸಿ ಪೋರ್ಟಲ್ ನಲ್ಲಿ 2013ರ ಮೇ 5ರಂದು ನಾಗ್ಪುರ-ಮುಂಬೈ ಎಕ್ಸ್ ಪ್ರೆಸ್ ರೈಲಿನಲ್ಲಿ ಅಮರಾವತಿಯಿಂದ ಮುಂಬೈಗೆ ಟಿಕೆಟ್ ಕಾಯ್ದಿರಿಸಿದ್ದರು. ಆನ್ ಲೈನ್ ನಲ್ಲಿ 300 ರೂಪಾಯಿ ಟಿಕೆಟ್ ದರ ಪಾವತಿಸಿದ್ದರು. ಅದಕ್ಕೆ ಅವರಿಗೆ ಮೊಬೈಲ್ ನಲ್ಲಿ ಐಆರ್ ಸಿಟಿಸಿಯಿಂದ ಸಂದೇಶ ಬಂತು.
ಪಿಎನ್ ಆರ್ ಸಂಖ್ಯೆ, ರೈಲು ವೇಳಾಪಟ್ಟಿ ಎಲ್ಲ ಬಂದಿತ್ತು. ಎಸ್ ಎಂಎಸ್ ನಲ್ಲಿ 1940 ಎಂದು ಬರೆಯಲಾಗಿತ್ತು, ಅದರಂತೆ ಅವರು ಅಮರಾವತಿ ರೈಲು ನಿಲ್ದಾಣಕ್ಕೆ ಹೋದಾಗ 4 ಗಂಟೆ ತಡವಾಗಿ ರೈಲು ಹೊರಡಲಿದೆ ಎಂದು ಗೊತ್ತಾಯಿತು.
ಆದರೆ ಅವರಿಗೆ ಮರುದಿನ ಆಫೀಸಿಗೆ ಹೋಗಬೇಕಾಗಿದ್ದರಿಂದ 180 ರೂಪಾಯಿಗೆ ಸಾಮಾನ್ಯ ದರ್ಜೆಯ ಟಿಕೆಟ್ ಕೊಟ್ಟು ಮತ್ತೊಂದು ರೈಲಿನಲ್ಲಿ ಸಾಮಾನ್ಯ ದರ್ಜೆ ಬೋಗಿಯಲ್ಲಿ ಪ್ರಯಾಣಿಸಿದರು. ಆದರೆ ತಮಗಾದ ಅನ್ಯಾಯಕ್ಕೆ ಸುಮ್ಮನೆ ಕೂರದೆ ಥಾಣೆ ಜಿಲ್ಲಾ ಗ್ರಾಹಕ ಕುಂದುಕೊರತೆ ವೇದಿಕೆಯ ಮುಂದೆ ದೂರು ಸಲ್ಲಿಸಿದರು. ಐಆರ್ ಸಿಟಿಸಿಗೆ ನಂತರ ಗೋಪಾಲ್ ಬಂಕಟ್ಲಲ್ಜಿ ಮೇಲ್ ನಲ್ಲಿ ಕೇಳಿದ ಪ್ರಶ್ನೆಗೂ ಕೂಡ ರೈಲು ಸಮಯಕ್ಕೆ ಸರಿಯಾಗಿ ಹೊರಟಿತ್ತು ಎಂದು ಉತ್ತರ ಬಂದಿತ್ತು.
ಆದರೆ ಕೆಲ ದಿನಗಳಲ್ಲಿ ಗೋಪಾಲ್ ಅವರಿಗೆ ದೆಹಲಿಯ ಐಆರ್ ಸಿಟಿಸಿ ಕೇಂದ್ರ ಕಚೇರಿಯಿಂದ ಮತ್ತೊಂದು ಉತ್ತರ ಬಂತು. ಅದರಲ್ಲಿ ರೈಲು ನಿಗದಿತ ಸಮಯಕ್ಕಿಂತ ತಡವಾಗಿ ಹೊರಟಿತ್ತು ಎಂದು ಉತ್ತರ ಬಂತು. ಅಲ್ಲದೆ ಅವರು ಟಿಕೆಟ್ ಗಾಗಿ ನೀಡಿದ್ದ 300 ರೂಪಾಯಿಗಳನ್ನು ವಾಪಸ್ ನೀಡಿತ್ತು. 
ಆದರೆ ಗೋಪಾಲ್ ಅವರು ತಾವು ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸಲು ನೀಡಿದ್ದ 180 ರೂಪಾಯಿ, ಆರ್ ಟಿಐಯಡಿ ಕೇಳಿದ್ದ ಪ್ರಶ್ನೆಗೆ ತಗುಲಿದ ವೆಚ್ಚವನ್ನು ಕೂಡ ಭರಿಸಬೇಕೆಂದು ಕೋರಿದರು. ಅದಕ್ಕೆ ಐಆರ್ ಸಿಟಿಸಿ ಕಡೆಯಿಂದ ಉತ್ತರ ಬರಲಿಲ್ಲ. ಅದಕ್ಕೆ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದರು.
ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಾಲಯ, 180 ರೂಪಾಯಿ ರೈಲು ಟಿಕೆಟ್ ದರ, ಆರ್ ಟಿಐಯಡಿ ಕೇಳಲಾದ ಪ್ರಶ್ನೆಗೆ ತಗುಲಿದ ವೆಚ್ಚ 150 ರೂಪಾಯಿ, ಮೇ 2013ರಿಂದ ಇಲ್ಲಿತನಕದ ಶೇಕಡಾ 12ರಷ್ಟು ಬಡ್ಡಿದರ 5 ಸಾವಿರ ರೂಪಾಯಿ, ಅವರು ಇಷ್ಟು ಸಮಯ ಅನುಭವಿಸಿದ ಮಾನಸಿಕ ಯಾತನೆ ಮತ್ತು ಕಾನೂನು ವೆಚ್ಚ 2 ಸಾವಿರ ರೂಪಾಯಿ ನೀಡಬೇಕೆಂದು ಆದೇಶಿಸಿದೆ.
SCROLL FOR NEXT