ಬೆಂಗಳೂರು: ಸಮಾನ ನಾಗರಿಕ ಸಂಹಿತೆ ಜಾರಿಯ ಪರಿಣಾಮಗಳ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರ ಕಾನೂನು ಆಯೋಗವನ್ನು ಕೋರಿರುವ ಬೆನ್ನಲ್ಲೇ ಯಾಂಗ್ ಇಂಡಿಯಾ ಫೋರಂ ಎಂಬ ಸಂಘಟನೆ, ಸಮಾನ ನಾಗರಿಕ ಸಂಹಿತೆ ಕುರಿತು ಆಗಸ್ಟ್ 15 ರಿಂದ ಒಂದು ವರ್ಷದ ಅವಧಿಯ ರಾಷ್ಟ್ರಮಟ್ಟದ ಚರ್ಚೆಯನ್ನು ಆಯೋಜಿಸಿದೆ.
ಭಾರತದ ಎಲ್ಲಾ 686 ಜಿಲ್ಲೆಗಳಲ್ಲೂ ಈ ಚರ್ಚಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಗುರಿ ಹೊಂದಿರುವುದಾಗಿ ಯಂಗ್ ಇಂಡಿಯಾ ಫೋರಂ ನ ಮಾರ್ಗದರ್ಶಕರಾದ ಡಾ.ಮನೀಶ್ ಮೋಕ್ಷಗುಂಡಂ ತಿಳಿಸಿದ್ದಾರೆ. ವರ್ಷ ಪೂರ್ತಿ ನಡೆಯಲಿರುವ ಅಭಿಯಾನದಲ್ಲಿ ದೇಶಾದ್ಯಂತ ಕನಿಷ್ಠ 20 ಸಾವಿರ ಚರ್ಚೆ ನಡೆಯಲಿದ್ದು ಸಮಾನ ನಾಗರಿಕ ಸಂಹಿತೆ(ಸಿಸಿಸಿ) ಬಗ್ಗೆ ನಾಗರಿಕ ಸಮಾಜದಿಂದ ವ್ಯಕ್ತವಾಗುವ ಅಭಿಪ್ರಾಯವನ್ನು ಸಂಗ್ರಹಿಸಿ, ಅದನ್ನು ಪ್ರಧಾನಿ ಕಾರ್ಯಾಲಯ, ಕಾನೂನು ಆಯೋಗಕ್ಕೆ ಕಳಿಸಿಕೊಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಅಭಿಯಾನ ಉದ್ಘಾಟನೆಗೊಳ್ಳಲಿರುವ ದಿನದಂದೇ(ಆಗಸ್ಟ್ 15, 2016)ರಂದು ಸುಮಾರು 100 ತಂಡಗಳು ಚರ್ಚೆಯನ್ನು ನಡೆಸಲಿವೆ. ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಹಾಸನ, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ ಹಾಗೂ ತುಮಕೂರು ಹಾಗೂ ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ, ಚಂಡೀಗಢ, ಡೆಹ್ರಾಡೂನ್, ವಿಶಾಖಪಟ್ಟಣ, ಅನಂತಪುರ, ಕಡಪ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿಯೂ ಸಮಾನ ನಾಗರಿಕ ಸಂಹಿತೆಯ ಅಗತ್ಯತೆ ಹಾಗೂ ಅದು ಜಾರಿಯಾಗಬೇಕಿರುವ ಸ್ವರೂಪದ ಬಗ್ಗೆ ಹಲವು ಸುತ್ತಿನ ಚರ್ಚೆಗಳು ನಡೆಯಲಿವೆ.
ಚರ್ಚೆಯ ಗುಂಪಿನಲ್ಲಿ ಕನಿಷ್ಠ 12 ಸದಸ್ಯರು ಇರಲಿದ್ದು, ವಿವಾಹ ಹಾಗೂ ವಿಚ್ಛೇದನ, ಅನುವಂಶೀಯತೆಯ ಕಾನೂನು ಸೇರಿದಂತೆ ವಿವಿಧ ಸಮುದಾಯಗಳ ನಡುವೆ ಇರುವ ಕಾನೂನುಗಳ ಸಮಾನ ಅಂಶಗಳು ಹಾಗೂ ಸಮುದಾಯಗಳೊಳಗೆ ಇರುವ ಕಾನೂನುಗಳ ಅಂಶಗಳನ್ನು ಚರ್ಚಿಸಲಾಗುವುದು ಈ ಅಭಿಯಾನದ ವಿಶೇಷತೆಯಾಗಿದೆ. ಚರ್ಚೆಯ ಒಟ್ಟಾರೆ ಅಭಿಪ್ರಾಯಗಳನ್ನು 70ನೇ ಸ್ವಾತಂತ್ರ್ಯ ದಿನಾಚರಣೆಯಂದು (ಆಗಸ್ಟ್ 15, 2017) ಕ್ಕೆ ಪ್ರಕಟಿಸಲಿದೆ. ಯಂಗ್ ಇಂಡಿಯಾ ಫೋರಂ ಸಂಘಟನೆ www.iDiscuss.org ಎಂಬ ಜಾಲತಾಣದ ಮೂಲಕ ಆನ್ ಲೈನ್ ನಲ್ಲೂ ಸಕ್ರಿಯವಾಗಿದೆ.