ದೇಶ

ಕಾಶ್ಮೀರ ವಿವಾದ ಭಾರತದ ಆಂತರಿಕ ವಿಷಯವಲ್ಲ: ಪ್ರತ್ಯೇಕತಾವಾದಿ ಮುಖಂಡರು

Sumana Upadhyaya
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿನ ಅನಿಶ್ಚಿತತೆ, ಅಶಾಂತಿಗಳಿಗೆ ಕೊನೆ ಹಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಬೆಳಗ್ಗೆ ಸರ್ವಪಕ್ಷ ಸಭೆ ಕರೆದಿದ್ದರು.ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರತ್ಯೇಕತಾವಾದಿ ಗುಂಪಿನ ಮುಖಂಡರು, ಕಾಶ್ಮೀರ ಸಮಸ್ಯೆ ಒಂದು ಆಂತರಿಕ ವಿಷಯ ಎಂದು ಎಲ್ಲಿಯವರೆಗೆ ಭಾರತದ ರಾಜಕೀಯ ನಾಯಕರು ಯೋಚಿಸುವುದನ್ನು ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೆ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದರು.
ಕಾಶ್ಮೀರದ ಅನೇಕ ಜಿಲ್ಲೆಗಳಲ್ಲಿ ಸತತ 35ನೇ ದಿನವಾದ ಇಂದು ಕೂಡ ಕರ್ಫ್ಯೂ ಹೇರಲಾಗಿದ್ದು, ಮೊಬೈಲ್, ಟೆಲಿಫೋನ್ ಸಂಪರ್ಕಗಳನ್ನು ರದ್ದುಪಡಿಸಲಾಗಿದೆ. 
ಹಿಜ್ ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿಯನ್ನು ಭದ್ರತಾ ಪಡೆ ಯೋಧರು ಜುಲೈ 8ರಂದು ಕೊಂದ ನಂತರ ಹಿಮಾಲಯದ ಪ್ರಾಂತ್ಯದಾದ್ಯಂತ ಹಿಂಸೆ, ಪ್ರತಿಭಟನೆ ನಡೆಯುತ್ತಲೇ ಇದೆ. 
ಸರ್ವಪಕ್ಷ ನಿಯೋಗವೊಂದು ಕಾಶ್ಮೀರಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಳೀಯ ನಾಯಕರೊಂದಿಗೆ ಮಾತುಕತೆ ನಡೆಸಬೇಕೆಂದು ವಿರೋಧ ಪಕ್ಷದ ನಾಯಕರು ಕರೆ ನೀಡಿದ್ದಾರೆ.
ಆದರೆ ಇಂದಿನ ಸಭೆಯಲ್ಲಿ ಕಠಿಣ ಸಂದೇಶ ನೀಡಿದ ಪ್ರಧಾನಿ, ಕಾಶ್ಮೀರಕ್ಕೆ ಸಂಧಾನಕಾರರನ್ನು ಕಳುಹಿಸಲು ಇದು ಸೂಕ್ತ ಸಮಯವಲ್ಲ, ದೇಶದ ಭದ್ರತೆ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಜುಲೈಯಿಂದ ಇಲ್ಲಿಯವರೆಗೆ ಹಿಂಸಾಚಾರದಲ್ಲಿ 54 ಮಂದಿ ಮೃತಪಟ್ಟಿದ್ದು, ಪ್ರತ್ಯೇಕತಾವಾದಿ ಗುಂಪು ಹುರ್ರಿಯತ್ ಕಾನ್ಫರೆನ್ಸ್ ಮುಖಂಡರು ಪ್ರತಿಭಟನಾಕಾರರ ಸಿಟ್ಟು ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ ಎಂದಿದ್ದಾರೆ.
ಭಾರತದ ಎಲ್ಲಾ ರಾಜಕೀಯ ಪಕ್ಷಗಳು, ಕಾಶ್ಮೀರದ ವಿವಾದ ಆಂತರಿಕ ವಿಷಯವಲ್ಲ ಎಂದು ಪರಿಗಣಿಸಿ ಅದನ್ನು ಸರಿಯಾಗಿ ಬಗೆಹರಿಸದಿದ್ದರೆ ಬಿಕ್ಕಟ್ಟು ಬಗೆಹರಿಯುವುದಿಲ್ಲ ಎಂದಿದ್ದಾರೆ ಎಂದು ಹುರ್ರಿಯತ್ ಕಾನ್ಫರೆನ್ಸ್ ನ ಅಧ್ಯಕ್ಷ ಮಿರ್ವೈಝ್ ಉಮರ್ ಫರೂಕ್ ಹೇಳಿದ್ದಾರೆ.
ಮೋದಿ ಸರ್ಕಾರ ಪ್ರತ್ಯೇಕತಾವಾದಿ ಗುಂಪಿನ ಮುಖಂಡರೊಂದಿಗೆ ಮಾತುಕತೆಯಿಂದ ದೂರವಿದ್ದು, ಪಾಕಿಸ್ತಾನದೊಂದಿಗೆ ಶಾಂತಿ ಮಾತುಕತೆಯನ್ನು ಕೂಡ ತಡೆಹಿಡಿದಿದೆ. ಭಾರತದ ಪ್ರಾಂತ್ಯದೊಳಗೆ ಉಗ್ರಗಾಮಿ ಚಟುವಟಿಕೆ ನಿಲ್ಲಬೇಕು, ನಂತರವಷ್ಟೆ ಮಾತುಕತೆ ಎಂದು ಸರ್ಕಾರ ಹೇಳಿದೆ. 
SCROLL FOR NEXT