ಪ್ರಮೋದ್ ಕುಮಾರ್ ಗೆ ಅಂತಿಮ ನಮನ
ನವದೆಹಲಿ: 'ಈ ದಿನ ನಮಗೆ ತುಂಬಾ ಮಹತ್ವದ ದಿನ'. ಇದು ಶ್ರೀನಗರದಲ್ಲಿ ರಾಷ್ಟ್ರ ಧ್ವಜ ಹಾರಿಸಿ ಕೆಲವೇ ನಿಮಿಷಗಳಲ್ಲಿ ಹುತಾತ್ಮರಾದ ಸಿಆರ್ಪಿಎಫ್ ಕಮಾಂಡಂಟ್ ಪ್ರಮೋದ್ ಕುಮಾರ್ ಅವರ ಕೊನೆಯ ಮಾತು.
ಸ್ವಾತಂತ್ರ್ಯ ದಿನದಂದು ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಹುತಾತ್ಮರಾದ 44 ವರ್ಷದ ಪ್ರಮೋದ್ ಕುಮಾರ್ ಅವರ ಅಂತ್ಯಕ್ರಿಯೆ ಇಂದು ತವರೂರಾದ ಜಾರ್ಖಂಡ್ನ ಜಂತರದಲ್ಲಿ ನೆರವೇರಿತು.
ಮಂಗಳವಾರ ಬೆಳಗ್ಗೆ ಜಂತರಕ್ಕೆ ತಲುಪಿದ ಹುತಾತ್ಮ ಪ್ರಮೋದ್ ಕುಮಾರ್ ಅವರ ಪಾರ್ಥೀವ ಶರೀರವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿತ್ತು.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸೋಮವಾರ ಬೆಳಗ್ಗೆ 8.30ಕ್ಕೆ ಧ್ವಜಾರೋಹಣ ಮಾಡಿದ್ದ ಕುಮಾರ್ 8.40ರ ಸುಮಾರಿಗೆ ಭಾಷಣ ಮಾಡಿ, ಭಾರತ 70ನೇ ಸ್ವಾತಂತ್ರ್ಯೋತ್ವವನ್ನು ಆಚರಿಸುತ್ತಿದ್ದು, ರಕ್ಷಣಾ ಪಡೆಗಳ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ರಕ್ಷಣಾ ಪಡೆಗಳು ಉಗ್ರರನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತಿವೆ ಮತ್ತು ಕಾಶ್ಮೀರ ಹಿಂಸಾಚಾರವನ್ನು ನಿಯಂತ್ರಿಸುವಲ್ಲೂ ಯಶಸ್ವಿಯಾಗಿವೆ ಎಂದು ಹೇಳಿದ್ದರು. ಅವರು ಭಾಷಣ ಮುಗಿಸಿ ಕೆಲವೇ ನಿಮಿಷಗಳಲ್ಲಿ ಉಗ್ರರು ಗ್ರೆನೇಡ್ ದಾಳಿ ನಡೆಸುತ್ತಿರುವ ಮಾಹಿತಿ ಬಂದಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಸಿಆರ್ಪಿಎಫ್ ಕಮಾಂಡಂಟ್ ಪ್ರಮೋದ್ ಕುಮಾರ್ ಹುತಾತ್ಮನಾಗಿದ್ದು, ಒಂಭತ್ತು ಮಂದಿ ಯೋಧರು ಗಾಯಗೊಂಡಿದ್ದರು.