ದೇಶ

ತ.ನಾಡು ವಿಧಾನಸಭೆಯಲ್ಲಿ ಹೈಡ್ರಾಮಾ: ಡಿಎಂಕೆಯ ಎಲ್ಲಾ 89 ಶಾಸಕರ ಅಮಾನತು

Lingaraj Badiger
ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಬುಧವಾರ ಭಾರಿ ಹೈಡ್ರಾಮಾ ನಡೆದಿದ್ದು, ಕಲಾಪಕ್ಕೆ ಅಡ್ಡಿಪಡಿಸಿದ ಪ್ರಮುಖ ಪ್ರತಿಪಕ್ಷ ಡಿಎಂಕೆಯ ಎಲ್ಲಾ 89 ಶಾಸಕರನ್ನು ಒಂದು ವಾರಗಳ ಕಾಲ ಅಮಾನತು ಮಾಡಲಾಗಿದೆ. ಅಲ್ಲದೆ ಮಾರ್ಷಲ್ ಗಳ ಮೂಲಕ ಎಲ್ಲಾ ಶಾಸಕರನ್ನು ಸದನದಿಂದ ಹೊರ ಹಾಕಿದ ಘಟನೆ ನಡೆದಿದೆ.
ಸದನದ ಗೌರವಕ್ಕೆ ಚ್ಯುತಿ ತಂದ ಹಿನ್ನೆಲೆಯಲ್ಲಿ ಸ್ಪೀಕರ್‌ ಧನ್‌ ಪಾಲ್‌ ಅವರು ಕರುಣಾನಿಧಿ ನೇತೃತ್ವದ ಡಿಎಂಕೆ ಪಕ್ಷದ ಎಲ್ಲಾ 89 ಶಾಸಕರನ್ನು ವಾರಗಳ ಕಾಲ ಅಮಾನತು ಮಾಡಿ, ಮಾರ್ಷಲ್‌ಗ‌ಳನ್ನು ಕರೆಸಿ ಸದನದಲ್ಲಿದ್ದ  ವಿಪಕ್ಷ ನಾಯಕ ಎಂ.ಕೆ.ಸ್ಟಾಲಿನ್‌ ಸೇರಿದಂತೆ ಎಲ್ಲಾ ಶಾಸಕರನ್ನು ಹೊರ ಹಾಕಲು ಆದೇಶಿಸಿದ್ದಾರೆ. 
ಎಐಎಡಿಎಂಕೆ ಶಾಸಕರೊಬ್ಬರ ಹೇಳಿಕೆ ವಿರುದ್ದ ಸಿಡಿದೆದ್ದ ಡಿಎಂಕೆ ಶಾಸಕರು ತೀವ್ರ ಗದ್ದಲ ನಡೆಸಿದರು. ಈ ವೇಳೆ ಸ್ಪೀಕರ್‌ ಧನ್‌ಪಾಲ್‌ ಹಾಗೂ ಸದನದ ನಾಯಕ ಸಚಿವ ಪನ್ನೀರ್‌ ಸೆಲ್ವಂ ನಡುವೆ ಡಿಎಂಕೆ ಶಾಸಕರ ತೀವ್ರವಾಗ್ವಾದ ನಡೆಯಿತು. ಗದ್ದಲ ತೀವ್ರವಾದಂತೆ ಸ್ಪೀಕರ್‌ ಶಾಸಕರನ್ನು ಅಮಾನತು ಮಾಡಿ ಮಾರ್ಷಲ್‌ಗ‌ಳ ಬಳಿ ಹೋರಹಾಕಲು ಆದೇಶಿಸಿದರು. ಈ ವೇಳೆ ಸದನಕ್ಕೆ ಪ್ರವೇಶಗೈದ ಸ್ಟಾಲಿನ್‌, ಹಿರಿಯ ಶಾಸಕ ದೊರೈ ಮುರುಗನ್‌  ಅವರನ್ನೂ ಮಾರ್ಷಲ್‌ಗ‌ಳು ಬಲವಂತಾಗಿ ಹೊರಗೆ ಎಳೆದೊಯ್ದರು. ಮುರುಗನ್‌ ಅವರು ಈ ವೇಳೆ ಕುಸಿದು ಬೀಳುವ ಹಂತಕ್ಕೆ ತಲುಪಿದರು. 
ಈ ಬಗ್ಗೆ ಕಿಡಿ ಕಾರಿರುವ ಡಿಎಂಕೆ ನಾಯಕರು ಮುಖ್ಯಮಂತ್ರಿ ಜಯಲಲಿತಾ ಅವರು ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸುತ್ತಿದ್ದಾರೆ ಎಂದಿದ್ದಾರೆ. ಅಲ್ಲದೆ ಸರ್ಕಾರದ ವಿರುದ್ಧ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲು ಇಂದು ಸಂಜೆ ಡಿಎಂಕೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.
SCROLL FOR NEXT