ಭೋಪಾಲ್ (ಮಧ್ಯಪ್ರದೇಶ): ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ದೂಷಿಸಲು ಹೋಗಿ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಅವರು ತಾವೇ ವಿವಾದಕ್ಕೆ ಸಿಲುಕಿಕೊಂಡಿರುವ ಘಟನೆ ಗುರುವಾರ ನಡೆದಿದೆ.
ಕಾಶ್ಮೀರ ಹಿಂಸಾಚಾರ ಘಟನೆ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ದಿಗ್ವಿಜಯ್ ಸಿಂಗ್ ಅವರು, ಕಾಶ್ಮೀರವನ್ನು ಭಾರತ ಆಕ್ರಮಿತ ಕಾಶ್ಮೀರವೆಂದು ಹೇಳಿ, ತಮಗೆ ಅರಿವಿಲ್ಲದೆಯೇ ಮಾತನಾಡಲು ಆರಂಭಿಸಿದ್ದರು. ನಂತರ ತಮ್ಮ ಅಚಾತುರ್ಯವನ್ನು ಅರಿತು ಕೂಡಲೇ ಹೇಳಿಕೆಗೆ ತೇಪೆ ಹಚ್ಚಲು ಪ್ರಯತ್ನಿಸಿದರು.
ಮೋದಿಯವರು ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಬಲೂಚಿಸ್ಥಾನದಲ್ಲಿರುವ ಜನತೆಗೆ ಅವರು ಧನ್ಯವಾದ ಹೇಳುತ್ತಾರೆ. ಆದರೆ, ಕಾಶ್ಮೀರದಲ್ಲಿ ನೆಲೆಸಿರುವ ಭಾರತೀಯರೊಂದಿಗೆ ಮಾತುಕತೆ ನಡೆಸಲು ಅವರು ತಯಾರಿಲ್ಲ. ಕಾಶ್ಮೀರವು ಭಾರತ ಅಕ್ರಮಿತ ಕಾಶ್ಮೀರವಾಗಲಿ ಅಥವಾ ಪಾಕ್ ಆಕ್ರಮಿತ ಕಾಶ್ಮೀರವಾಗಲಿ ನಾವು ಆ ಪ್ರದೇಶದಲ್ಲಿರುವ ಜನರ ಮೇಲೆ ನಂಬಿಕೆ ಇಡಬೇಕು. ಕಾಶ್ಮೀರ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.
ಭಾರತ ಆಕ್ರಮಿತ ಕಾಶ್ಮೀರ ಹೇಳಿಕೆಗೆ ತೇಪೆ ಹಚ್ಚಲು ಯತ್ನಿಸಿದ ಅವರು, ಕಾಶ್ಮೀರ ಭಾರತದ ಭಾಗವಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕನಿಷ್ಠ ಪಕ್ಷ ಕಾಶ್ಮೀರದ ಬಗ್ಗೆಯಾದರೂ ಕಾಳಜಿ ವಹಿಸಬೇಕು ಎಂದರು.
ತಮ್ಮ ಆಚಾತುರ್ಯ ಹೇಳಿಕೆಗೆ ಸ್ಪಷ್ಟನೆ ನೀಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತದ ಭಾಗವಾಗಿರುವ ಕಾಶ್ಮೀರದ ಬಗ್ಗೆ ಕಾಳಜಿವಹಿಸುವ ಬದಲು ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆಂಬುದು ನನ್ನ ಹೇಳಿಕೆಯ ಅರ್ಥವಾಗಿತ್ತು ಎಂದು ತಿಳಿಸಿದರು.