ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಬಿಜೆಪಿಯು ತನ್ನ ನೂತನ ಪ್ರಧಾನ ಕಚೇರಿಯನ್ನು ನಿರ್ಮಾಣ ಮಾಡುತ್ತಿದ್ದು, ನೂತನ ಪ್ರಧಾನ ಕಚೇರಿ ನಿರ್ಮಾಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಶಂಕುಸ್ಥಾಪನೆ ಮಾಡಿದ್ದಾರೆ.
ಭೂಮಿ ಪೂಜೆಯಲ್ಲಿ ನರೇಂದ್ರ ಮೋದಿಯವರೊಂದಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕೂಡ ಭಾಗಿಯಾಗಿದ್ದರು.
ನವದೆಹಲಿಯ ದೀನ್ ದಯಾಳ್ ಉಪಾಧ್ಯಾಯ್ ಮಾರ್ಗ್ ಬಳಿಯಿರುವ ಐಟಿಒ ಕ್ರಾಸ್ ಜಂಕ್ಷನ್ ನಲ್ಲಿ 2 ಎಕರೆ ಭೂಮಿಯಲ್ಲಿ ಬಿಜೆಪಿ ತನ್ನ ಪ್ರಧಾನ ಕಚೇರಿಯನ್ನು ನಿರ್ಮಾಣ ಮಾಡುತ್ತಿದ್ದು, ನೂತನ ಕಟ್ಟಡದಲ್ಲಿ ವೈಫೈ, ಅಂಡರ್ ಗ್ರೌಂಡ್ ಉದ್ಯಾನವನ, ಕಾನ್ಫರೆನ್ಸ್ ಹಾಲ್, ಕ್ಯಾಂಟೀನ್, ಮಾಧ್ಯಮಗಳಿಗೆ ವ್ಯವಸ್ಥೆ, ಗ್ರಂಥಾಲಯ, ರೀಡಿಂಗ್ ರೂಮ್ ಸೇರಿದಂತೆ ಇನ್ನಿತರೆ ವ್ಯವಸ್ಥೆಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ಅಶೋಕ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯು ಚಿಕ್ಕದಾಗಿದ್ದು, ಪಕ್ಷವು ಚಟುವಟಿಕೆ ನಡೆಸಲು ಇಕ್ಕಟ್ಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಪಕ್ಷವು ಹೊಸದಾಗಿ ಕಚೇರಿಯನ್ನು ತೆರೆಯಲು ನಿರ್ಧರಿಸಿತ್ತು. ಇದರಂತೆ ಕಚೇರಿ ನಿರ್ಮಾಣಕ್ಕೆ ಇಂದು ಮೋದಿಯವರು ಶಂಕುಸ್ಥಾಪನೆ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. 2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯೊಳಗಾಗಿ ಕಚೇರಿ ನಿರ್ಮಾಣವನ್ನು ಸಂಪೂರ್ಣಗೊಳಿಸಲು ಪಕ್ಷ ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ.