ಅಕ್ರಮವಾಗಿ ಅಡಗಿಸಿಟ್ಟ ಸಾರಾಯಿಯನ್ನು ವಶಪಡಿಸಿಕೊಂಡ ಪೊಲೀಸರು
ಪಾಟ್ನಾ: ಬಿಹಾರದ ಗೋಪಲ್ಗಂಜ್ ಜಿಲ್ಲೆಯಲ್ಲಿ ನಡೆದ ಸೇಂದಿ ದುರಂತದಲ್ಲಿ ಸರ್ಕಾರ 25 ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿದೆ. ಅವರಲ್ಲಿ ಗೋಪಾಲ್ಗಂಜ್ ಪಟ್ಟಣ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸೇರಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಮದ್ಯ ಸೇವಿಸಿ ಮೃತಪಟ್ಟವರ ಸಂಖ್ಯೆ 18 ಕ್ಕೇರಿದೆ.
ಘಟನೆ ಬಗ್ಗೆ ನಿನ್ನೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ಹೊಸ ಅಬಕಾರಿ ನಿಯಮ ಪ್ರಕಾರ ಅಪರಾಧಿಗಳಿಗೆ ಶಿಕ್ಷೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಗೋಪಾಲ್ಗಂಜ್ ಪಟ್ಟಣ ಪೊಲೀಸ್ ಠಾಣೆಯ ಸರಹದ್ದಿನಲ್ಲಿನ ಖಜುರ್ವಾನಿ ಗ್ರಾಮದಲ್ಲಿ ಅಕ್ರಮ ಲಿಕ್ಕರ್ ಘಟಕವನ್ನು ನಡೆಸಲಾಗುತ್ತಿತ್ತು. ಇದರಲ್ಲಿ ಎರಡು ಪ್ರತ್ಯೇಕ ಕೇಸುಗಳಿಗೆ ಸಂಬಂಧಪಟ್ಟಂತೆ 14 ಮಂದಿ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕ ಪಿ.ಕೆ.ಠಾಕೂರ್ ತಿಳಿಸಿದ್ದಾರೆ.
ಈ ಸಂಬಂಧ ಇಲ್ಲಿಯವರೆಗೆ 6 ಮಂದಿಯನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿಯನ್ನು ಪತ್ತೆಹಚ್ಚಲು ವ್ಯಾಪಕ ಶೋಧ ನಡೆಯುತ್ತಿದೆ. ಪೊಲೀಸರು ಹುಡುಕಾಟ ನಡೆಸಿ ಸುಮಾರು 300 ಲೀಟರ್ ದೇಸಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಬಿಹಾರ ಸರ್ಕಾರ ಕಳೆದ ಏಪ್ರಿಲ್ ನಿಂದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದ ನಂತರ ಈ ಘಟನೆ ನಡೆದಿರುವುದು ವಿರೋಧ ಪಕ್ಷಗಳಿಗೆ ಸರ್ಕಾರದ ಮೇಲೆ ಟೀಕೆ ಮಾಡಲು ಪ್ರಮುಖ ಅಸ್ತ್ರವಾಗಿದೆ ಎನ್ನಬಹುದು.