ಜೈಪುರ: ಜಗತ್ತಿನ ಅತ್ಯಂತ ಹಿರಿಯ ಹೆಣ್ಣು ಹುಲಿ ರಣಥಂಬೋರಿನ ರಾಣಿ ಮಚಲಿ ಮೃತಪಟ್ಟಿದೆ.
ರಾಜಸ್ಥಾನದ ರಣಥಂಬೋರು ರಾಷ್ಟ್ರೀಯ ಉದ್ಯಾನವನದ ಪ್ರಮುಖ ಆಕರ್ಷಣೆಯಾಗಿದ್ದ ಮಚಲಿ ಮೃತಪಟ್ಟಿದ್ದು ಪ್ರಾಣಿಪ್ರಿಯರ ನೋವಿಗೆ ಕಾರಣವಾಗಿದೆ.
ಭಾರತ ಹುಲಿಲೋಕದ ಕಣ್ಮಣಿ ಮಚಲಿ ಕಳೆದ ನಾಲ್ಕು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದಳು ಮತ್ತು ಉದ್ಯಾನದಲ್ಲಿ ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. 4 ದಿನಗಳ ಹಿಂದೆ ನಾಲ್ಕು ಕೆಜಿ ಮಾಂಸ ತಿಂದಿದ್ದೇ ಕೊನೆ. ಮಚಲಿ ಸಂಪೂರ್ಣ ಜೀವಿತಾವಧಿ ಮುಗಿದು ಆಕೆ ಸಹಜ ಸಾವನ್ನು ಕಂಡಿದ್ದಾಳೆ ಎಂದು ಉದ್ಯಾನದ ಕ್ಷೇತ್ರ ನಿರ್ದೇಶಕ ಯೋಗೇಶ್ ಕುಮಾರ್ ಸಾಹು ತಿಳಿಸಿದ್ದಾರೆ.
ಹುಲಿಗಳು ಸಾಮಾನ್ಯವಾಗಿ 12-13 ವರ್ಷ ಕಾಲ ಜೀವಿತಾವಧಿ ಹೊಂದಿದ್ದು. ಮಚಲಿ ಮಾತ್ರ ಶತಾಯುಷಿಯಂತೆ 19 ವರ್ಷ ಬದುಕಿದ್ದು ದೇಶದ ಇತಿಹಾಸದಲ್ಲೇ ಅತಿ ಹೆಚ್ಚು ಕಾಲ ಬದುಕಿದ ಹುಲಿ ಎಂಬ ಖ್ಯಾತಿಗೆ ಪಾತ್ರವಾಗಿದೆ.
1997ರಲ್ಲಿ ಮಚಲಿ ಹುಟ್ಟಿತ್ತು, ಅದರ ಮುಖದಲ್ಲಿದ್ದ ಮೀನಿನಾಕೃತಿಯ ಮಚ್ಚೆ ನೋಡಿ ಹುಲಿಗೆ ಮಚಲಿ ಎಂದು ನಾಮಕರಣ ಮಾಡಲಾಗಿತ್ತು. ರಣಥಂಬೋರು ಉದ್ಯಾನವ ಆಕರ್ಷಣೆಯಾಗಿ ಬೆಳೆದ ಮಚಲಿ ಅತಿ ಹೆಚ್ಚು ಬಾರಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದ ದಾಖಲೆ ಹೊಂದಿದೆ. ಮಚಲಿ ಬಹುತೇಕ ಕಾಣಿಸಿಕೊಳ್ಳುತ್ತಿದ್ದುದ್ದು ಕೊಳದ ಪಕ್ಕದಲ್ಲಿ ಹಾಗಾಗಿ ಆಕೆಗೆ ಕೊಳದ ರಾಣಿ ಎಂಬ ಬಿರುದಿದೆ. ಕೊಳದ ಪಕ್ಕದಲ್ಲಿ ನಿಂತಾಗಿ ನೀರಲ್ಲಿ ಕಾಣುವ ಬಿಂಬವೂ ಸೇರಿದಂತೆ ಆಕೆಯ ಚೆಲುವನ್ನು ಸೆರೆ ಹಿಡಿಯುವುದೇ ಪ್ರವಾಸಿಗರಿಗೆ ಹಿಗ್ಗು.
ಮಚಲಿ ಎಷ್ಟು ಧೈರ್ಯಶಾಲಿ ಎಂದರೆ ಅದು ಕೊಳದ ಪಕ್ಕದಲ್ಲಿ 14 ಅಡಿ ಉದ್ದದ ದೃಢಕಾಯದ ಮೊಸಳೆ ಜತೆ ಕಾದಾಡಿತ್ತು ಮೊಸಳೆಯನ್ನು ಹಿಮ್ಮೆಟ್ಟಿಸಿತ್ತು. ಕಳೆದ 16 ವರ್ಷಗಳಲ್ಲಿ ಮಚಲಿ ಜನ್ಮ ನೀಡಿದ್ದು 9 ಮರಿಗಳಿಗೆ.