ನವದೆಹಲಿ: ರಿಯೊ ಒಲಿಂಪಿಕ್ಸ್ ನಲ್ಲಿ ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಲಗ್ಗೆ ಇಡುವ ಮೂಲಕ ಭಾರತಕ್ಕೆ ಪದಕ ಖಚಿತ ಪಡಿಸಿದ ಪಿವಿ ಸಿಂಧೂಗೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ.
ಅತ್ತ ಸಿಂಧೂ ಫೈನಲ್ ಗೇರುತ್ತಿದ್ದಂತೆಯೇ ಇತ್ತ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, ಇಡೀ ಭಾರತವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದೀರಿ. ನಿಮಗೆ ಶುಭವಾಗಲಿ ಎಂದು ಟ್ವೀಟ್ ಮಾಡಿದ್ದಾರೆ. ನಿನ್ನೆ ರಿಯೋ ಡಿ ಜನೈರೋದಲ್ಲಿ ನಡೆದ ಮಹಿಳೆಯರ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಪಿವಿ ಸಿಂಧೂ ಜಪಾನ್ ದೇಶದ ನೊಜೋಮಿ ಒಕುಹರಾ ಅವರನ್ನು 21-19, 21-10 ನೇರ ಸೆಟ್ ಗಳಿಂದ ಮಣಿಸಿ, ವಿದ್ಯುಕ್ತವಾಗಿ ಫೈನಲ್ ಲಗ್ಗೆ ಇಟ್ಟಿದ್ದರು.
ಆ ಮೂಲಕ ಒಲಿಂಪಿಕ್ಸ್ ನಲ್ಲಿ ಫೈನಲ್ ಗೇರಿದ ಭಾರತದ ಮೊದಲ ಮಹಿಳಾ ಆಟರಾರ್ತಿ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ಕುಸ್ತಿಯಲ್ಲಿ ಸಾಕ್ಷಿ ಮಲ್ಲಿಕ್ ಕಂಚಿನ ಪದಕ ಗೆದ್ದ ಬೆನ್ನಲ್ಲೇ ಪಿವಿ ಸಿಂಧೂ ಕೂಡ ಪದಕ ಖಚಿತ ಪಡಿಸಿರುವುದು ಸಮಸ್ತ ಭಾರತೀಯರಲ್ಲಿ ಹರ್ಷ ಮೂಡಿಸಿದೆ.
ಇನ್ನು ಫೈನಲ್ ಪಂದ್ಯ ಇಂದು ಸಂಜೆ 7.30ಕ್ಕೆ ಆರಂಭವಾಗಲಿದ್ದು, ಫೈನಲ್ ನಲ್ಲಿ ಸಿಂಧೂ ಸ್ಪೇನ್ ದೇಶದ ಕ್ಯಾರೋಲಿನಾ ಮರಿನ್ ಅವರ ವಿರುದ್ಧ ಸೆಣಸಲಿದ್ದಾರೆ.