ಡೆಹ್ರಾಡೂನ್: ಉತ್ತರಾಖಂಡದಲ್ಲಿ ಮೇಘಸ್ಫೋಟ ಸಂಭವಿಸಿ ಭಾರಿ ಮಳೆ ಸುರಿದ ಪರಿಣಾಮ ಒಂದೇ ಕುಟುಂಬದ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರಾಖಂಡದ ಪೌರಿ ಪ್ರದೇಶಳದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಮೇಘಸ್ಪೋಟದಲ್ಲಿ 7 ಮಂದಿ ಸಾವಿಗೀಡಾಗಿದ್ದು, ಹಲವರಿಗೆ ಗಾಯಗಳಾಗಿವೆ. ಮೇಘಸ್ಫೋಟ ಹಿನ್ನಲೆಯಲ್ಲಿ ಪೌರಿ ಪ್ರವಾಹ ಭೀತಿ ಶುರುವಾಗಿದ್ದು, ರಾಜ್ಯ ಪೊಲೀಸ್ ಮತ್ತು ನೆರೆ ಸಂತ್ರಸ್ಥರ ರಕ್ಷಣಾ ಪಡೆ ಸ್ಥಳಕ್ಕೆ ದೌಡಾಯಿಸಿದೆ. ಪೊಲೀಸರಿಗೆ ಅಗ್ನಿಶಾಮಕ ದಳದ ಸಿಬ್ಬಂದಿ ಸಾಥ್ ನೀಡುತ್ತಿದ್ದು, ರಕ್ಷಣಾ ಕಾರ್ಯಚರಣೆ ಪ್ರಗತಿಯಲ್ಲಿದೆ.
ಮಾಕೋಲ ಮತ್ತು ಗರ್ವಾಲ್ ಪ್ರದೇಶದಲ್ಲಿ ಮನೆ ಮಾಡಿಕೊಂಡಿದ್ದ ಕುಟುಂಬದ ಮೇಲೆ ಮೇಘಸ್ಪೋಟಕ್ಕೆ ಸಿಡಿದ ಬೃಹತ್ ಬಂಡೆಕಲ್ಲು ಹರಿದು ಮನೆ ಧ್ವಂಸಗೊಂಡಿದೆ ಎಂದು ತಿಳಿದುಬಂದಿದೆ. ಈ ವೇಳೆ ಅಲ್ಲಿ ನೆಲೆಸಿದ್ದ ದೀಪಕ್ ಸಿಂಗ್ ಎಂಬುವರ ಕುಟುಂಬದ ಏಳು ಮಂದಿ ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್ ಭಟ್ ತಿಳಿಸಿದ್ದಾರೆ. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಮಳೆಯಿಂದಾಗಿ ಸಂಭವಿಸಿರುವ ಪ್ರವಾಹದಲ್ಲಿ ಹಲವರು ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಅಂತೆಯೇ ಪ್ರವಾಹದಿಂದಾಗಿ ಪೌರಿ ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಸ್ಥಗಿತಗೊಂಡಿದ್ದು, ರಸ್ತೆ ಸಂಚಾರ ಅಸ್ತವ್ಯಸ್ಥವಾಗಿದೆ.