ಜಿಗಿಶಾ ಘೋಷ್(ಸಂಗ್ರಹ ಚಿತ್ರ)
ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಸಂಚಲನ ಮೂಡಿಸಿದ್ದ 2009ರಲ್ಲಿ ಐಟಿ ಉದ್ಯೋಗಿ ಜಿಗಿಶಾ ಘೋಷ್ ಅಪಹರಣ ಮತ್ತು ಹತ್ಯೆಯ ಇಬ್ಬರು ಅಪರಾಧಿಗಳಿಗೆ ದೆಹಲಿಯ ನ್ಯಾಯಾಲಯ ಸೋಮವಾರ ಮರಣದಂಡನೆ ಶಿಕ್ಷೆ ವಿಧಿಸಿದೆ.
ಹತ್ಯೆಯ ಅಪರಾಧಿಗಳಾದ ರವಿ ಕಪೂರ್ ಮತ್ತು ಅಮಿತ್ ಶುಕ್ಲಾ ಅವರಿಗೆ ಮರಣ ದಂಡನೆ ವಿಧಿಸಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಂದೀಪ್ ಯಾದವ್ ಶಿಕ್ಷೆ ಪ್ರಕಟಿಸಿದ್ದರೆ, ಮೂರನೇ ಅಪರಾಧಿ ಬಲ್ಜೀತ್ ಮಲಿಕ್ ಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ರವಿ ಮತ್ತು ಅಮಿತ್ ಗೆ ತಲಾ 1 ಲಕ್ಷ ದಂಡ ಹಾಗೂ ಬಲ್ಜೀತ್ ಗೆ 3 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಈ ಮೂವರು ಅಪರಾಧಿಗಳು 2009, ಮಾರ್ಚ್ 18ರಂದು 28 ವರ್ಷದ ಜಿಗಿಶಾ ಘೋಷ್ ಆಫೀಸ್ ಕ್ಯಾಬ್ ನಲ್ಲಿ ದಕ್ಷಿಣ ದೆಹಲಿಯ ವಸಂತ ವಿಹಾರ ಪ್ರದೇಶದಲ್ಲಿರುವ ತನ್ನ ಮನೆಗೆ ಕಚೇರಿ ಕೆಲಸ ಮುಗಿಸಿಕೊಂಡು ಬಂದಿಳಿದಿದ್ದರು. ಆಗ ಈ ಮೂವರು ಅಪರಾಧಿಗಳು ಅವರನ್ನು ಅಪಹರಿಸಿ ಹತ್ಯೆಗೈದಿದ್ದರು. ಮೂರು ದಿನ ಕಳೆದ ನಂತರ ಅವರ ಮೃತದೇಹ ಹರ್ಯಾಣದ ಸೂರಜ್ ಕುಂಡ್ ಪ್ರದೇಶದಲ್ಲಿ ಪತ್ತೆಯಾಗಿತ್ತು.
ಜಿಗಿಶಾ ನೊಯ್ಡಾದಲ್ಲಿ ಹೆವಿಟ್ ಅಸೋಸಿಯೇಷನ್ ನಲ್ಲಿ ವ್ಯವಸ್ಥಾಪಕ ಸಲಹಾ ಘಟಕದಲ್ಲಿ ಕಾರ್ಯಚರಣೆ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮೂವರು ಅಪರಾಧಿಗಳು ಜಿಗಿಶಾರನ್ನು ತಮ್ಮ ಮನಸ್ಸಿನ ವಿಕೃತ ಖುಷಿಗಾಗಿ ಕೊಲೆ ಮಾಡಿದ್ದು ಯಾವುದೇ ಕನಿಕರ ತೋರದೆ ಹೀನಾಯ ಕೃತ್ಯವೆಸಗಿದ್ದಾರೆ. ಕೊಲೆ ಮಾಡಿದ ನಂತರ ಜಿಗಿಶಾಳ ಡೆಬಿಟ್ ಕಾರ್ಡು ಬಳಸಿ ಶಾಪಿಂಗ್ ಕೂಡ ಮಾಡಿದ್ದಾರೆ. ಇವರ ಕುಕೃತ್ಯಕ್ಕೆ ಮರಣದಂಡನೆ ಶಿಕ್ಷೆಯನ್ನೇ ನೀಡಬೇಕೆಂದು ದೆಹಲಿ ಪೊಲೀಸರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.