ಜೋದ್ಫುರ್: ಅಪ್ರಾಪ್ತ ಬಾಲಕನಿಂದ ಅತ್ಯಾಚಾರಕ್ಕೊಳಗಾದ 7 ವರ್ಷದ ಬಾಲಕಿ ಮನೆಯಲ್ಲೇ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ತಾನದಲ್ಲಿ ನಡೆದಿದೆ.
ಕೂಲಿ ಕಾರ್ಮಿಕರ 7 ವರ್ಷದ ಬಾಲಕಿ ಸ್ವಾತಂತ್ರ್ಯೋತ್ಸವದ ದಿನ ತನ್ನದೇ ಮನೆಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸಾವು ಎಂದರೇನು ಎಂಬುದನ್ನರಿಯದ ಬಾಲಕಿ ಸಾವಿಗೆ ಶರಣಾಗಿದ್ದು ಕುಟುಂಬಸ್ಥರನ್ನು, ಸ್ಥಳೀಯರನ್ನಷ್ಟೇ ಅಲ್ಲದೇ ಪೊಲೀಸರನ್ನು ದಿಗ್ಭ್ರಮೆಗೊಳಗಾಗುವಂತೆ ಮಾಡಿದೆ.
ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗವಾಗಿದೆ. ತನಿಖೆ ನಡೆಸಿದಾಗ ಆಕೆಯ ಮನೆಯಲ್ಲಿ ವಾಸಿಸುವ ಅಪ್ರಾಪ್ತ ಬಾಲಕ ಆಕೆಯ ಮೇಲೆ ಎರಡು ಬಾರಿ ಅತ್ಯಾಚಾರ ನಡೆಸಿರುವುದಾಗಿ ತಿಳಿದು ಬಂದಿದೆ. ನೊಂದ ಬಾಲಕಿ ಆಗಸ್ಟ್ 15 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ನಡೆದ ದಿನದಿಂತ ನಾಪತ್ತೆಯಾಗಿದ್ದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಇಬ್ಬರ ಪೋಷಕರು ಬಿಹಾರ ಮೂಲದವರಾಗಿದ್ದು, ಕೂಲಿ ಕೆಲಸಕ್ಕಾಗಿ ಇಲ್ಲಿ ಬಂದು ನೆಲೆಸಿದ್ದರು. ಪೋಷಕರು ಮನೆಯಲ್ಲಿ ಇಲ್ಲದ ವೇಳೆ ಬಾಲಕ ಈ ಕೃತ್ಯ ನಡೆಸಿದ್ದಾನೆ.