ನವದೆಹಲಿ: ಪಾಸ್ ಪೋರ್ಟ್ ಅರ್ಜಿಯಲ್ಲಿ ತಂದೆಯ ಹೆಸರು ನಮೂದಿಸಲೇಬೇಕೆಂದು ಅಧಿಕಾರಿಗಳು ಅರ್ಜಿದಾರರ ಮೇಲೆ ಒತ್ತಡ ಹೇರಬಾರದು ಎಂದು ದೆಹಲಿ ಹೈಕೋರ್ಟ್ ಮಂಗಳವಾರ ಹೇಳಿದೆ.
ಅರ್ಜಿದಾರರೊಬ್ಬರು ತಮ್ಮ ತಂದೆಯ ಹೆಸರನ್ನು ನಮೂದಿಸಿಲ್ಲ ಎಂಬ ಕಾರಣಕ್ಕೆ ಪಾಸ್ ಪೋರ್ಟ್ ನ್ನು ನವೀಕರಿಸಲು ಅಧಿಕಾರಿಗಳು ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. 2007ರಲ್ಲಿ ನೀಡಲಾಗಿದ್ದ ಪಾಸ್ ಪೋರ್ಟ್ ನ್ನು ನವೀಕರಿಸಲು ಅಧಿಕಾರಿಗಳು ನಿರಾಕರಿಸಿದ್ದು, ಹಳೆಯ ಪಾಸ್ ಪೋರ್ಟ್ ನ್ನು ಅಧಿಕಾರಿಘಳು ರದ್ದು ಮಾಡಿದ್ದಾರೆ ಎಂದು ಅರ್ಜಿಯಲ್ಲಿ ಹೇಳಿಕೊಂಡಿದ್ದರು.
ಇದರಂತೆ ಈ ಅರ್ಜಿಯನ್ನು ಇಂದು ಪರಿಶೀಲನೆ ನಡೆಸಿರುವ ನ್ಯಾಯಮೂರ್ತಿ ಸಂಜೀವ್ ಸಚ್ ದೇವ್ ಅವರಿದ್ದ ಏಕಸದಸ್ಯ ಪೀಠವು, ಪಾಸ್ ಪೋರ್ಟ್ ಅರ್ಜಿಯಲ್ಲಿ ತಂದೆಯ ಹೆಸರು ನಮೂದಿಸಲೇಬೇಕೆಂದು ಅಧಿಕಾರಿಗಳು ಅರ್ಜಿದಾರರ ಮೇಲೆ ಒತ್ತಡ ಹೇರಬಾರದು. ಅರ್ಜಿಯಲ್ಲಿ ತಂದೆಯ ಹೆಸರನ್ನು ನಮೂದಿಸಲೇಬೇಕೆಂದು ಕಾನೂನು ಹೇಳುವುದಿಲ್ಲ ಎಂದು ತಿಳಿಸಿದ್ದಾರೆ.
ಇದರಂತೆ ವಿಚಾರಣೆ ವೇಳೆ ಪಾಸ್ ಪೋರ್ಟ್ ಕಚೇರಿಯ ಪರ ವಕೀಲರು ತಮ್ಮ ವಾದ ಮಂಡಿಸಿದ್ದು, ಅರ್ಜಿದಾರರು ಮೆಲ್ಬರ್ನ್ ನಲ್ಲಿದ್ದು 2017 ರವರೆಗೆ ಅವರು ಅಲ್ಲಿಯೇ ನೆಲೆಸಿರುತ್ತಾರೆ. ಇದರಂತೆ ಅವಧಿಗೂ ಮೊದಲೇ ಪಾಸ್ ಪೋರ್ಟ್ ನ್ನು ನವೀಕರಣ ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಪಾಸ್ ಪೋರ್ಟ್ ನವೀಕರಣಕ್ಕೆ ತಂದೆಯ ಹೆಸರನ್ನು ನಮೂದಿಸುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ, ಆ ಅರ್ಜಿಯನ್ನು ಸಾಫ್ಟ್ ವೇರ್ ಪರಿಗಣಿಸುವುದಿಲ್ಲ. ತಂದೆಯ ಹೆಸರು ಇಲ್ಲದ ಅರ್ಜಿಯನ್ನು ಅದು ತಿರಸ್ಕರಿಸುತ್ತದೆ ಎಂದು ಹೇಳಿದರು.
ವಕೀಲರ ಈ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಸಂಜೀವ್ ಸಚ್ ದೇವ್ ಅವರು, ಸಾಫ್ಟ್ ವೇರ್ ವ್ಯವಸ್ಥೆಯನ್ನು ಪರಿಷ್ಕರಿಸಿ ಅದನ್ನು ಮಾರ್ಪಡಿಸಿ. ಅರ್ಜಿಯಲ್ಲಿ ತಂದೆ ಹೆಸರು ನಮೂದಿಸಿಲ್ಲದ ಅರ್ಜಿಯನ್ನೂ ಪರಿಗಣನೆಗೆ ತೆಗೆದುಕೊಳ್ಳುವಂತೆ ಮಾಡಿ ಎಂದು ಹೇಳಿದರು. ಅಲ್ಲದೆ, ತತ್ಕಾಲ್ ಯೋಜನೆ ಅಡಿಯಲ್ಲಿ ಅರ್ಜಿದಾರರು ಅರ್ಜಿ ಸಲ್ಲಿಸಿರುವುದಿಂದ 3 ವಾರಗಳೊಳಗಾಗಿ ಪಾಸ್ ಪೋರ್ಟ್ ನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.