ನವದೆಹಲಿ: ಬಾಡಿಗೆ ತಾಯಂದಿರ ಹಿತಾಸಕ್ತಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟ ಬುಧವಾರ 2016ರ ಬಾಡಿಗೆ ತಾಯ್ತನ(ನಿಯಂತ್ರಣ) ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವುದಕ್ಕೆ ಒಪ್ಪಿಗೆ ನೀಡಿದ್ದು, ಮುಂದಿನ ದಿನಗಳಲ್ಲಿ ವಾಣಿಜ್ಯ ಬಾಡಿಗೆ ತಾಯ್ತನಕ್ಕೆ ಕಡಿವಾಣ ಹಾಕಲಿದೆ.
ಸಚಿವ ಸಂಪುಟ ಸಭೆಯ ಬಳಿಕ ವಿಚಾರವನ್ನು ಮಾಧ್ಯಮಕ್ಕೆ ತಿಳಿಸಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಇತ್ತೀಚಿನ ದಿನಗಳಲ್ಲಿ ಬಾಡಿಗೆ ತಾಯ್ತನ ಒಂದು ಹವ್ಯಾಸವಾಗುತ್ತಿದೆ. ಸೆಲೆಬ್ರಿಟಿಗಳು ಇಬ್ಬರು ಮಕ್ಕಳಿದ್ದರೂ ಬಾಡಿಗೆ ತಾಯ್ತನ ಮೂಲಕ ಮಕ್ಕಳನ್ನು ಪಡೆದ ಉದಾಹರಣೆಗಳಿವೆ. ತಮ್ಮ ಪತ್ನಿ ನೋವು ಅನುಭವಿಸಬಾರದು ಎಂಬ ಏಕೈಕ ಉದ್ದೇಶಕ್ಕಾಗಿ ಮಕ್ಕಳನ್ನು ಪಡೆಯಲು ಇವರು ಬಾಡಿಗೆ ತಾಯಂದಿರನ್ನು ಬಳಸಿಕೊಳ್ಳುತ್ತಾರೆ ಎಂದು ಹೆಸರು ಹೇಳದೆಯೇ ಪರೋಕ್ಷವಾಗಿ ಬಾಲಿವುಡ್ ನಟರಾದ ಶಾರುಖ್ ಖಾನ್ ಹಾಗೂ ಆಮೀರ್ ಖಾನ್ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಇಬ್ಬರು ಬಾಲಿವುಡ್ ನಟರು ಸೇರಿದಂತೆ ಹಲವು ಗಣ್ಯರು ಮಕ್ಕಳಿದ್ದರೂ ಬಾಡಿಗೆ ತಾಯಂದಿರ ಮೂಲಕ ಮಕ್ಕಳನ್ನು ಪಡೆದ ಉದಾಹರಣೆಗಳಿವೆ.
ನೂತನ ಮಸೂದೆಯಲ್ಲಿ ಕಾನೂನು ಬದ್ಧವಾಗಿ ಮದುವೆಯಾಗಿ ಕನಿಷ್ಠ 5 ವರ್ಷದ ದಾಂಪತ್ಯ ಜೀವನ ನಡೆಸಿದ ದಂಪತಿ ಮಾತ್ರವೇ ಪರ್ಯಾಯ ಮಾತೃತ್ವದ ನೆರವು ಪಡೆಯಬಹುದು. ಮಕ್ಕಳಿರುವ ದಂಪತಿಗೆ ಈ ವಿಧಾನದಲ್ಲಿ ಮಕ್ಕಳನ್ನು ಪಡೆಯಲು ಅವಕಾಶ ಇಲ್ಲ. ವಿದೇಶೀಯರು, ವಲಸಿಗ ಭಾರತೀಯರು, ಏಕ ಪಾಲಕರು, ಲಿವ್-ಇನ್ ಜೋಡಿಗಳು ಮತ್ತು ಸಲಿಂಗಕಾಮಿ ಜೋಡಿಗಳಿಗೆ ಪರ್ಯಾಯ ಮಾತೃತ್ವದ ಮೂಲಕ ಮಕ್ಕಳನ್ನು ಪಡೆಯಲು ಮಸೂದೆಯಲ್ಲಿ ಅವಕಾಶ ಇರುವುದಿಲ್ಲ ಎಂದು ಸುಷ್ಮಾ ವಿವರಿಸಿದರು.
ಇನ್ನು ವಿದೇಶಿ ಬಾಡಿಗೆ ತಾಯಂದರಿಂದ ಮಗು ಪಡೆಯುವುದಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಬಾಡಿಗೆ ತಾಯಂದಿರ ಪ್ರಕರಣಗಳನ್ನು ನಿರ್ವಹಣೆ ಮಾಡುವುದಕ್ಕಾಗಿಯೇ ಕೇಂದ್ರ ಸರ್ಕಾರ ರಾಷ್ಟ್ರೀಯ ಬಾಡಿಗೆ ತಾಯ್ತನ ಮಂಡಳಿ ಸ್ಥಾಪನೆ ಮಾಡಲಿದೆ ಎಂದು ಸುಷ್ಮಾ ಸ್ವರಾಜ್ ಮಾಹಿತಿ ನೀಡಿದ್ದಾರೆ.