ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಶನಿವಾರ ಮೂರು ಬಾರಿ ಲಘು ಭೂಕಂಪನವಾಗಿದೆ. ಆದರೆ ಯಾವುದೇ ಆಸ್ತಿ ಹಾನಿ ಅಥವಾ ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ರಾಂಪುರ್ ಉಪ ವಿಭಾಗದಲ್ಲಿ ಹಲವು ಬಾರಿ ಭೂಮಿ ಕಂಪಿಸಿದ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಬಂದ್ ಮಾಡಲಾಗಿದೆ ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ನಿಶಾಂತ್ ಥಾಕೂರ್ ಅವರು ದೂರವಾಣಿ ಮೂಲಕ ಐಎಎನ್ಎಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಕುಲ್ಲು ಜಿಲ್ಲೆಯ ನಿರ್ಮಾಂಡ್ ಮತ್ತು ಅನಿ ಪ್ರದೇಶದಲ್ಲಿ ಭೂಕಂಪದ ಪ್ರಭಾವ ಹೆಚ್ಚಾಗಿದ್ದು, ರಿಕ್ಟರ್ ಮಾಪಕದಲ್ಲಿ ಮೊದಲ ಕಂಪನ 4.6, ಎರಡನೇ ಕಂಪನ 6.44 ಮತ್ತು ಮೂರನೇ ಕಂಪನ 4.3ರಷ್ಟು ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.