ಧಾರ್ಮಿಕ ಗುರು ರವಿಶಂಕರ ಗುರೂಜಿಯನ್ನು ಭೇಟಿ ಮಾಡಿದ ಬುರ್ಹಾನ್ ವಾನಿಯ ತಂದೆ ಮುಜಾಫರ್ ವಾನಿ(ಫೋಟೋ ಕೃಪೆ-ರವಿಶಂಕರ ಗುರೂಜಿಯವರ ಟ್ವಿಟ್ಟರ್ ಖಾತೆ)
ಬೆಂಗಳೂರು: ಜುಲೈ 8ರಂದು ಭದ್ರತಾ ಪಡೆಯಿಂದ ಹತನಾದ ಹಿಜ್ ಬುಲ್ ಮುಜಾಹಿದ್ದೀನ್ ಉಗ್ರಗಾಮಿ ಗುಂಪಿನ ನಾಯಕ ಬುರ್ಹಾನ್ ವಾನಿಯ ತಂದೆ ಮುಜಾಫರ್ ವಾನಿ ಆರ್ಟ್ ಆಫ್ ಲಿವಿಂಗ್ ನ ಧಾರ್ಮಿಕ ಗುರು ರವಿಶಂಕರ ಗುರೂಜಿಯನ್ನು ಭೇಟಿ ಮಾಡಿದ್ದಾರೆ.
ಈ ಬಗ್ಗೆ ನಿನ್ನೆ ಸಂಜೆ ರವಿಶಂಕರ ಗುರೂಜಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋವನ್ನು ಹಂಚಿಕೊಂಡು, ಬುರ್ಹಾನ್ ವಾನಿಯ ತಂದೆ ಮುಜಾಫರ್ ವಾನಿ ಕಳೆದೆರಡು ದಿನಗಳಿಂದ ಆಶ್ರಮದಲ್ಲಿದ್ದರು. ನಾವು ಅನೇಕ ವಿಷಯಗಳ ಕುರಿತು ಚರ್ಚೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನು ಆರ್ಟ್ ಆಫ್ ಲಿವಿಂಗ್ ರಿಟ್ವೀಟ್ ಮಾಡಿದೆ. '' ಮುಜಾಫರ್ ವಾನಿ ಎರಡು ದಿನ ಆಶ್ರಮದಲ್ಲಿದ್ದರು. ಇಂದಿನ ಸ್ಥಿತಿಗತಿ ಬಗ್ಗೆ ಗುರೂಜಿ ಮತ್ತು ವಾನಿ ಚರ್ಚೆ ನಡೆಸಿದ್ದಾರೆ. ಕಾಶ್ಮೀರದ ಜನತೆಯ ನೋವು, ಅಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಹೇಗೆ ಕಾಪಾಡಬಹುದು ಎಂಬುದರ ಬಗ್ಗೆ ಕೂಡ ಚರ್ಚೆಸಿದ್ದಾರೆ. ಅವರ ಈ ಭೇಟಿ ಮತ್ತು ಚರ್ಚೆ ಕೇವಲ ವೈಯಕ್ತಿಕ ಮತ್ತು ಮಾನವೀಯ ನೆಲೆಯ ಆಧಾರದಲ್ಲಿತ್ತು'' ಎಂದು ಆಶ್ರಮ ಹೇಳಿಕೆ ನೀಡಿದೆ.
ಗುರೂಜಿ ಭೇಟಿ ಬಳಿಕ ಪ್ರತಿಕ್ರಿಯೆ ನೀಡಿದ ವಾನಿ, ನಾನು ಆಶ್ರಮಕ್ಕೆ ಚಿಕಿತ್ಸೆಗಾಗಿ ಹೋದೆ. ನನ್ನ ಕೆಲವು ಕಾಯಿಲೆಗಳಿಗೆ ಪರಿಹಾರ ಕಂಡುಕೊಳ್ಳಲು ಭೇಟಿ ನೀಡಿದೆ ಎಂದು ತಿಳಿಸಿದ್ದಾರೆ.
ಅವರು(ರವಿಶಂಕರ ಗುರೂಜಿ) ನನ್ನಲ್ಲಿ ಬೇರೇನೂ ಕೇಳಿಲ್ಲ. ಕೇವಲ 5 ನಿಮಿಷಗಳ ಕಾಲ ಮಾತನಾಡಿದರಷ್ಟೆ ಎಂದು ವಾನಿ ದೂರವಾಣಿ ಮೂಲಕ ಮಾಧ್ಯಮಗಳಿಗೆ ಕಾಶ್ಮೀರದ ಟ್ರಾಲ್ ನಲ್ಲಿರುವ ತನ್ನ ಮನೆಯಿಂದ ಪ್ರತಿಕ್ರಿಯಿಸಿದ್ದಾರೆ.
ನಾನು ಕೆಲವು ಔಷಧಿಗಳನ್ನು ತೆಗೆದುಕೊಂಡು ಮರಳಿದ್ದೇನೆ ಅಷ್ಟೆ ಎಂದು ಮುಜಾಫರ್ ಹೇಳಿದ್ದಾರೆ.