ನವದೆಹಲಿ: ಕಾಶ್ಮೀರದ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಾ ಭಾರತಕ್ಕೆ ತಲೆ ನೋವಾಗಿರುವ ಪಾಕಿಸ್ತಾನಕ್ಕೆ ತಿರುಗೇಟು ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅಲ್ಲಿನ ಸರ್ಕಾರದ ವಿರುದ್ಧ ತಿರುಗಿ ಬಿದ್ದು ಭಾರತದ ಸ್ನೇಹಹಸ್ತ ಚಾಚಿರುವ ಗಿಲ್ಗಿಟ್, ಬಾಲೂಚಿಸ್ತಾನದ ಅನಿವಾಸಿಗಳನ್ನು ಜನವರಿಯಲ್ಲಿ ನಡೆಯಲಿರುವ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ದೇಶವಿರೋಧಿ ಪ್ರತ್ಯೇಕತಾವಾದಿಗಳೊಂದಿಗೆ ಸೇರಿ ಕಾಶ್ಮೀರ ಕಬಳಿಸುವ ಹುನ್ನಾರ ಹೊಂದಿರುವ ಪಾಕಿಸ್ತಾನ ತಾನು ಮಾಡುತ್ತಿರುವ ತಂತ್ರಗಾರಿಕೆಯನ್ನೇ ಬಳಸಿ ಭಾರತ ನೀಡಿರುವ ತಿರುಗೇಟು ಮರ್ಮಾಘಾತ ನೀಡಿದೆ.
ಬೆಂಗಳೂರಿನಲ್ಲಿ ನಡೆಯಲಿರುವ ಪ್ರವಾಸಿ ದಿವಸ್ ಕಾರ್ಯಕ್ರಮಕ್ಕೆ ಗಿಲ್ಗಿಟ್ ಜನರು ಆಗಮಿಸುವುದಾದಲ್ಲಿ ಕೈಗೊಳ್ಳಬೇಕಿರುವ ಭದ್ರತಾ ಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ಗುಪ್ತಚರ ಇಲಾಖೆಗಳು ಚರ್ಚಿಸಿವೆ.