ನವದೆಹಲಿ: ದೇಶದ ಅಸ್ಮಿತೆಗೆ ಧಕ್ಕೆ ಉಂಟುಮಾಡುತ್ತಿರುವವರ ಬಗ್ಗೆ ಕಾಶ್ಮೀರದ ಯುವ ಜನತೆಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಕಾಶ್ಮೀರದಲ್ಲಿ ಗಲಭೆ, ಜಿಹಾದ್ ಗೆ ಯುವಕರನ್ನು ಪ್ರಚೋದಿಸುತ್ತಿರುವವರು ತಮ್ಮ ಮಕ್ಕಳನ್ನು ಮಾತ್ರ ಸುರಕ್ಷಿತವಾಗಿ ಬೆಳೆಸುತ್ತಿದ್ದಾರೆ. ಆದರೆ ಪ್ರಚೋದನೆಗೊಳಗಾಗಿ ಕಲ್ಲು ತೂರಾಟ ಮಾಡುತ್ತಿರುವ ಬಡತನದ ಹಿನ್ನೆಲೆಯುಳ್ಳವರು ಮಾತ್ರ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಜಿತೇಂದ್ರ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ವರ್ಗದ ಹೆಸರಿನಲ್ಲಿ ಕಾಶ್ಮೀರ ಯುವಕರನ್ನು ಭಯೋತ್ಪಾದನೆಗೆ ಪ್ರಚೋದಿಸುತ್ತಿರುವವರು ಯಾಕೆ ತಮ್ಮ ಮಕ್ಕಳನ್ನು ಜನ್ನತ್( ಸ್ವರ್ಗ)ಕ್ಕೆ ಕಲಿಸಲು ಇಚ್ಛಿಸುವುದಿಲ್ಲ ಎಂದು ಜಿತೇಂದ್ರ ಸಿಂಗ್ ಪ್ರಶ್ನಿಸಿದ್ದು, ಭಯೋತ್ಪಾದನೆ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜಿಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಅಮಾಯಕ ನಾಗರಿಕರ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆ ನಡೆಸಲಾಗುವುದು ಎಂದು ಜಿತೇಂದ್ರ ಸಿಂಗ್ ಭರವಸೆ ನೀಡಿದ್ದಾರೆ.