ನವದೆಹಲಿ: ವಿವಿಧ ಬ್ಯಾಂಕ್ ಗಳಲ್ಲಿ ಬಹುಕೋಟಿ ಸಾಲ ಮಾಡಿ ವಿದೇಶಕ್ಕೆ ಹೋಗಿರುವ ಉದ್ಯಮಿ ವಿಜಯ್ ಮಲ್ಯಾಗೆ ಹೊಸ ಸಂಕಷ್ಟ ಶುರುವಾಗಿದ್ದು, ಮಲ್ಯಾಗೆ 2ನೇ ಬಾರಿ ಸಾಲ ನೀಡಿದ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಉದ್ಯಮಿ ವಿಜಯ್ ಮಲ್ಯಾಗೆ ನೀಡಿದ್ದ ಹಳೆಯ ಸಾಲವೇ ಇನ್ನೂ ತೀರಿಲ್ಲ. ಹೀಗಿದ್ದೂ ಅವರಿಗೆ ಎರಡೆರಡು ಬಾರಿ ಸಾಲ ಮಂಜೂರು ಮಾಡಿದ ಸಾರ್ವಜನಿಕ ಬ್ಯಾಂಕ್ ಗಳ 14 ಅಧಿಕಾರಿಗಳ ವಿರುದ್ಧ ಗಂಭೀರ ವಂಚನೆ ತನಿಖಾ ಕಚೇರಿ ಅಧಿಕಾರಿಗಳು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ವಿಜಯ್ ಮಲ್ಯ ಒಡೆತನ ಕಿಂಗ್ ಫಿಶರ್ ಏರ್ ಲೈನ್ಸ್ ಸಂಸ್ಥೆಗೆ ನೀಡಲಾಗಿದ್ದ ಸಾಲದ ಪ್ರಮಾಣವನ್ನು ಹೆಚ್ಚಿಸಲಾಗಿತ್ತು.
ಈ ಅಂಶವನ್ನು ತನಿಖಾಧಿಕಾರಿಗಳು ಇದೀಗ ಮನಗಂಡಿದ್ದು, ಹಳೆಯ ಸಾಲವನ್ನೇ ವಾಪಸ್ ಮಾಡದ ವಿಜಯ್ ಮಲ್ಯಾ ಸಂಸ್ಥೆಗೆ ನೀಡಲಾಗಿದ್ದ ಸಾಲದ ಪ್ರಮಾಣವನ್ನು ಹೆಚ್ಚಿಸಲು ಕಾರಣವೇನು ಎಂದು ಸ್ಪಷ್ಟನೆ ಕೇಳಿ ತನಿಖಾಧಿಕಾರಿಗಳು ಅಂದಿನ ಬ್ಯಾಂಕ್ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಮೂಲಗಳ ಪ್ರಕಾರ ಅಧಿಕಾರಿಗಳು ಈಗಾಗಲೇ ಅಂದಿನ ಬ್ಯಾಂಕ್ ಅಧಿಕಾರಿಗಳನ್ನು ಒಂದು ಸುತ್ತಿನ ವಿಚಾರಣೆಗೆ ಒಳಪಡಿಸಿದ್ದು, ಮತ್ತಷ್ಟು ಮಾಹಿತಿ ಸಂಗ್ರಹಕ್ಕಾಗಿ ಮತ್ತೆ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ವಿಜಯ್ ಮಲ್ಯಗೆ ಸಾಲ ನೀಡಲು ಕಿಕ್ ಬ್ಯಾಕ್ ಪಡೆದ ಅಧಿಕಾರಿಗಳು?
ಇನ್ನು ವಿಜಯ್ ಮಲ್ಯಾಗೆ 2ನೇ ಬಾರಿ ಸಾಲ ನೀಡಲು ಬ್ಯಾಂಕ್ ಅಧಿಕಾರಿಗಳು ಕಿಕ್ ಬ್ಯಾಕ್ ಪಡೆದಿದ್ದಾರೆಯೇ ಎಂಬ ಶಂಕೆ ಗಂಭೀರ ವಂಚನೆ ತನಿಖಾ ಕಚೇರಿ ಅಧಿಕಾರಿಗಳನ್ನು ಕಾಡುತ್ತಿದ್ದು, ಅದಾಗಲೇ ಸಾಲ ಪಡೆದಿದ್ದ ಮಲ್ಯಾಗೆ ಆ ಸಾಲ ಇನ್ನೂ ತೀರದ ಹೋದರೂ ಮತ್ತೆ ಸಾಲ ನೀಡುವ ಅಥವಾ ಸಾಲದ ಪ್ರಮಾಣವನ್ನು ಹೆಚ್ಚಿಸುವ ಜರೂರತ್ತು ಬ್ಯಾಂಕ್ ಅಧಿಕಾರಿಗಳಿಗೆ ಏನಿತ್ತು ಎಂದು ಎಸ್ಎಫ್ಐಒ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಇದೇ ಕಾರಣಕ್ಕೆ ಅವರು ಬ್ಯಾಂಕ್ ನ ಮಾಜಿ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಅನುಮಾನ ಹುಟ್ಟಿಸುವ ಅಂಶಗಳು
ಬ್ಯಾಂಕ್ ಅಧಿಕಾರಿಗಳು ನೀಡಿರುವ ದಾಖಲೆಗಳ ಪ್ರಕಾರ ಮಲ್ಯಾಗೆ ಸಾಲ ನೀಡಲು ಕಿಂಗ್ ಫಿಷರ್ ಸಂಸ್ಥೆ ಸಲ್ಲಿಸಿದ್ದ ದಾಖಲೆಗಳನ್ನು ಸಂಪೂರ್ಣ ಪರಿಶೀಲಿಸುವ ಮುನ್ನವೇ ಸಾಲ ಮಂಜೂರಾಗಿದ್ದು ಏಕೆ? ಮಲ್ಯ ಸಲ್ಲಿಸಿದ್ದ ದಾಖಲೆಗಳು ಮೇಲ್ನೋಟಕ್ಕೆ ಫೋರ್ಜರಿ ಮಾಡಿರುವುದು ಸಾಬೀತಾಗಿದ್ದರೂ, ಅದನ್ನು ಹೆಚ್ಚಿನ ಪರೀಕ್ಷೆಗೆ ಕಳುಹಿಸಲಾಗಿಲ್ಲ. ಬ್ಯಾಂಕ್ ನ ಈ ಕ್ರಮದ ಹಿಂದೆ ಅಧಿಕಾರಿಯ ಕೈವಾಡವಿತ್ತೆ ಎಂಬ ಅನುಮಾನ ಕಾಡುತ್ತಿದೆ. ಅಂತೆಯೇ ಅದಾಗಲೇ ಮಲ್ಯ ಸಾಲಪಡೆದಿದ್ದರೂ 2007 ಮತ್ತು 2010ರ ಅವಧಿಯಲ್ಲಿ ಮತ್ತೆ ಮಲ್ಯಗೆ ಸಾಲ ನೀಡಿದ್ದು ಅಥವಾ ಸಾಲದ ಪ್ರಮಾಣವನ್ನು ಏರಿಕೆ ಮಾಡಿದ್ದು ಏಕೆ? ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ.