ದೇಶ

ಮಹಿಳಾ ಹಾಕಿ ಆಟಗಾರರಿಗೆ ಅವಮಾನ: ವರದಿ ತಿರಸ್ಕರಿಸಿದ ರೈಲ್ವೆ ಇಲಾಖೆ

Manjula VN

ನವದೆಹಲಿ: ರಿಯೋ ಒಲಿಂಪಿಕ್ಸ್ 2016ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಭಾರತದ ಮಹಿಳಾ ಹಾಕಿ ಆಟಗಾರರಿಗೆ ಅವಮಾನ ಮಾಡಲಾಗಿದೆ ಎಂಬ ವರದಿಯನ್ನು ಭಾರತೀಯ ರೈಲ್ವೆ ಇಲಾಖೆ ಸೋಮವಾರ ತಿರಸ್ಕರಿಸಿದೆ.

ರಿಯೋ ಒಲಿಂಪಿಕ್ಸ್ ಮುಗಿದ ನಂತರ ಭಾರತೀಯ ಮಹಿಳಾ ಹಾಕಿ ಆಟಗಾರರು ರಾಂಚಿಯಿಂದ ರೂರ್ಕೆಲಾ ಗೆ ಹೋಗುವ ಸಲುವಾಗಿ ಬೊಕಾರೊ-ಅಲೆಪ್ಪಿ ಎಕ್ಸ್ ಪ್ರೆಸ್ ರೈಲನ್ನು ಹತ್ತಿದ್ದರು. ರಿಯೋ ಒಲಿಂಪಿಕ್ಸ್ 2016ರಲ್ಲಿ ದೇಶದ ಪರವಾಗಿ ಆಟವಾಡಿದ್ದ ಭಾರತೀಯ ಮಹಿಳಾ ಹಾಕಿ ಆಟಗಾರರಿಗೆ ರೈಲಿನಲ್ಲಿ ಪ್ರಯಾಣ ಮಾಡಲು ಟಿಕೆಟ್ ಸಿಕ್ಕಿದ್ದರೂ, ಟಿಕೆಟ್ ಖಾತ್ರಿಯಾಗದ ಹಿನ್ನೆಲೆಯಲ್ಲಿ ರೈಲಿನ ಬೋಗಿ ಮೇಲೆ ಕುಳಿತು ಪ್ರಯಾಣ ಮಾಡಿದ್ದರೆಂದು ಹೇಳಲಾಗುತ್ತಿತ್ತು. ರೈಲ್ವೆ ಇಲಾಖೆಯ ಈ ವರ್ತನೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.

ಈ ಹಿನ್ನೆಲೆಯಲ್ಲಿ ಇಂದು ಹೇಳಿಕೆಯನ್ನು ಬಿಡುಗಡೆ ಮಾಡಿರುವ ಭಾರತೀಯ ರೈಲ್ವೆ ಇಲಾಖೆಯು, ಭಾರತೀಯ ಮಹಿಳಾ ಹಾಕಿ ಆಟಗಾರರಿಗೆ ರೈಲ್ವೆ ಇಲಾಖೆ ಅವಮಾನ ಮಾಡಿದೆ ಎಂಬ ವರದಿ ತಪ್ಪು. ಟಿಸಿ ಯಾವುದೇ ಆಟಗಾರರಿಗೆ ಬಲವಂತವಾಗಿ ಬೋಗಿ ಮೇಲೆ ಕುಳಿತು ಪ್ರಯಾಣ ಮಾಡುವಂತೆ ಸೂಚಿಸಿಲ್ಲ. ನಮಗೆ ಯಾರ ಮೇಲೂ ದ್ವೇಷವಿಲ್ಲ. ಆಟಗಾರರು ಮಾಹಿತಿ ನೀಡದೆಯೇ ನಿಲ್ದಾಣಕ್ಕೆ ಬಂದಿದ್ದರಿಂದ ಗೊಂದಲಗಳು ಸೃಷ್ಟಿಯಾಗಿದೆ ಎಂದು ಹೇಳಿದೆ.

ಹಾಕಿ ಆಟಗಾರರು ರಾಂಚಿ ವಿಮಾನ ನಿಲ್ದಾಣ ಬರುತ್ತಿದ್ದಂತೆಯೇ ತರಾತುರಿಯಲ್ಲಿ ಭಾರತೀಯ ರೈಲ್ವೆ ಇಲಾಖೆಗೆ ಮಾಹಿತಿ ನೀಡದಯೇ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ. ಮಾಹಿತಿ ನೀಡಿದ್ದರೆ ಆಟಗಾರರಿಗೆ ಪತ್ಯೇಕ ವ್ಯವಸ್ಥೆಯನ್ನು ಮಾಡುತ್ತಿದ್ದೆವು. ಖಾತ್ರಿಯಾಗದ ಟಿಕೆಟ್ ಜೊತೆಗೆ ಆಟಗಾರರು ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ.

ತಪಾಸಣೆ ಮಾಡಿದ ನಂತರ ಟಿಸಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು 20 ನಿಮಿಷ ಸಮಯಾವಕಾಶ ಕೇಳಿದ್ದಾನೆ. ಆದರೆ, ಆಟಗಾರರು ಕುಟುಂಬಸ್ಥರನ್ನು ಭೇಟಿಯಾಗುವ ತವಕದಲ್ಲಿದ್ದರು. ಕಾಯುವುದಕ್ಕೆ ಅವರು ಸಿದ್ಧರಿರಲಿಲ್ಲ. ಬೋಗಿ ಮೇಲೆ ಕುಳಿತು ಪ್ರಯಾಣ ಮಾಡುವಂತೆ ಯಾರಿಗೂ ಬಲವಂತ ಮಾಡಿಲ್ಲ. ನಮಗೆ ಯಾರ ಮೇಲೂ ದ್ವೇಷವಿಲ್ಲ. ಆಟಗಾರರು ತಮ್ಮ ಯೋಜನೆಯನ್ನು ಹಿಂದಕ್ಕೆ ಹಾಕಿದ್ದರಿಂದ ಗೊಂದಲಗಳು ಸೃಷ್ಟಿಯಾಗಿವೆ ಎಂದು ಸ್ಪಷ್ಟಪಡಿಸಿದೆ.

SCROLL FOR NEXT