ದೇಶ

ದೆಹಲಿ ಸೆಕ್ಸ್ ರಾಕೇಟ್: 5 ಸಾವಿರ ಹುಡುಗಿಯರನ್ನು ಮಾರಿ 100 ಕೋಟಿ ಸಂಪಾದಿಸಿದ ದಂಪತಿ ಬಂಧನ

Lingaraj Badiger
ನವದೆಹಲಿ: ದೆಹಲಿಯಲ್ಲಿ ಬಹುದೊಡ್ಡ ಸೆಕ್ಸ್ ರಾಕೇಟ್ ಅನ್ನು ಬಯಲು ಮಾಡಿರುವ ದೆಹಲಿ ಪೊಲೀಸರು, ಮಾನವ ಕಳ್ಳಸಾಗಣೆ ಜಾಲದಲ್ಲಿ ತೊಡಗಿದ್ದ ಮುಸ್ಲಿಂ ದಂಪತಿ ಸೇರಿದಂತೆ ಮಂದಿಯನ್ನು ಮಂಗಳವಾರ ಬಂಧಿಸಿದ್ದಾರೆ.
ಹುಡುಗಿಯರ ಮಾರಾಟ ಜಾಲದ ಕಿಂಗ್ ಪಿನ್ ದೆಹಲಿಯ ಜಿ.ಬಿ. ರಸ್ತೆಯ ನಿವಾಸಿ ಸಾಯಿರಾ ಬೇಗಂ(45) ಹಾಗೂ ಆಕೆಯ ಪತಿ ಆಫಾಕ್‌ ಹುಸೇನ್‌(50) ಮತ್ತು ಅವರ ಆರು ಮಂದಿ ಸಹಾಯಕರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಈ ಎಂಟು ಆರೋಪಿಗಳ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಗ್ರಹ ಕಾಯಿದೆ(ಮಕೋಕಾ)ಯಡಿ ಪ್ರಕರಣ ದಾಖಲಿಸಲಾಗಿದೆ.
1999ರಿಂದ ಈ ತನಕ ಮಾನವ ಕಳ್ಳಸಾಗಣೆ ಜಾಲದಲ್ಲಿ ತೊಡಗಿದ್ದ ಈ ಮುಸ್ಲಿಂ ದಂಪತಿ, ನೇಪಾಳ, ಪಶ್ಚಿಮ ಬಂಗಾಳ, ಒಡಿಶಾ, ಕರ್ನಾಟಕ, ಅಸ್ಸಾಂ ಹಾಗೂ ಆಂಧ್ರಪ್ರದೇಶ ಸೇರಿದಂತೆ ಇತರೆ ರಾಜ್ಯಗಳ ಸುಮಾರು 5 ಸಾವಿರ ಹುಡುಗಿಯರನ್ನು ಮಾರಾಟ ಮಾಡಿ ಕನಿಷ್ಠ ನೂರು ಕೋಟಿ ರುಪಾಯಿ ಸಂಪಾದಿಸಿರುವ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.
ವಿವಿಧ ರಾಜ್ಯಗಳಿಂದ ಸುಮಾರು 5 ಸಾವಿರ ಬಡ ಹುಡುಗಿಯರನ್ನು ಕಳ್ಳಸಾಗಣೆ ಮಾಡಿ 50,000 ರು.ಗಳಿಂದ ಎರಡು ಲಕ್ಷ ರು.ಗಳ ವರೆಗೆ ಮಾರಾಟ ಮಾಡಿ ನೂರು ಕೋಟಿ ರುಪಾಯಿ ಸಂಪಾದಿಸಿದ್ದಾರೆ. ಪ್ರಾಯ ಸಣ್ಣದಿದ್ದಷ್ಟು ಹುಡುಗಿಯರನ್ನು ಹೆಚ್ಚಿನ ಬೆಲೆಗೆ ಮಾರಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಅಲ್ಮೆರಾ ಮತ್ತು ಸುರಂಗಗಳ ಮೂಲಕ ಕಳ್ಳ ಸಾಗಣೆ ಮಾಡುತ್ತಿದ್ದ ದಂಪತಿಗಳು, ಸಣ್ಣಸಣ್ಣ ಕೊಣೆಗಳಲ್ಲೂ ಗ್ರಾಹಕರಿಗೆ ಸೆಕ್ಸ್ ಸೇವೆ ಒದಗಿಸುವಂತೆ ಒತ್ತಡ ಹೇರುತ್ತಿದ್ದರು ಎಂದು ಹುಡುಗಿಯರು ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ.
ಹುಸೇನ್‌ ಮತ್ತು ಬೇಗಂ ಮಾತ್ರವಲ್ಲದೆ ಪೊಲೀಸರು, ಈ ದಂಪತಿ ವಾಹನ ಚಾಲಕನಾಗಿದ್ದ ರಮೇಶ್‌ ಮತ್ತು ಚೀಫ್ ಮ್ಯಾನೇಜರ್‌ ವಾಸು ಎಂಬವರನ್ನು ಕೂಡ ಬಂಧಿಸಿದ್ದಾರೆ. ಇತರ ಬಂಧಿತರನ್ನು ಶಂಶದ್‌, ಶಿಲ್ಪಿ, ಮುಮ್ತಾಜ್‌ ಮತ್ತು ಪೂಜಾ ಥಾಪಾ ಎಂದು ಗುರುತಿಸಲಾಗಿದೆ. ಎಲ್ಲ ಬಂಧಿತರನ್ನು ಸೆ.2ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 
ವಿಶೇಷವೆಂದರೆ ಸಾಯಿರಾ ಮತ್ತು ಆಫಾಕ್‌ ಅವರನ್ನು 1990ರಿಂದ ದಾಖಲಾಗಿದ್ದ ಹಲವಾರು ಪ್ರಕರಣಗಳಲ್ಲಿ ಬಂಧಿಸಲಾಗಿತ್ತು. 2001ರಲ್ಲಿ ಆಕೆಗೆ ಏಳು ವರ್ಷಗಳ ಜೈಲು ಶಿಕ್ಷೆಯಾಗಿತ್ತು. ಆ ಶಿಕ್ಷೆಯನ್ನು ಮುಗಿಸಿ ಹೊರಬಂದ ಬಳಿಕ ಆಕೆ ಪುನಃ ಹುಡುಗಿಯರ ಮಾರಾಟ ದಂಧೆಯನ್ನು ಆರಂಭಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
SCROLL FOR NEXT