ದೆಹಲಿ-ಗುರುಂಗಾವ್ ರಸ್ತೆಯಲ್ಲಿ ಭಾರೀ ಮಳೆಯಿಂದ ರಸ್ತೆ ತುಂಬ ನೀರು ಉಕ್ಕಿ ವಾಹನ ಸಂಚಾರರು ಪ್ರಯಾಸ ಪಡುತ್ತಿರುವುದು.
ನವದೆಹಲಿ: ದೆಹಲಿ-ಎನ್ ಸಿಆರ್, ಗುರುಂಗಾವ್ ಸುತ್ತಮುತ್ತ ಬುಧವಾರ ಬೆಳಗ್ಗೆಯಿಂದಲೇ ಗುಡುಗು ಸಹಿತ ಭಾರೀ ಮಳೆ ಸುರಿಯುತ್ತಿದೆ. ರಸ್ತೆಗಳಲ್ಲೆಲ್ಲಾ ನೀರು ತುಂಬಿ ಪ್ರವಾಹ ಉಂಟಾಗಿದೆ.
ಕಳೆದ ವಾರ ದೆಹಲಿಯಲ್ಲಿ ವಿಪರೀತ ಬಿಸಿಲು ಇತ್ತು. ಉಷ್ಣಾಂಶ 29 ಡಿಗ್ರಿಯಿಂದ 33 ಡಿಗ್ರಿ ಸೆಲ್ಸಿಯಸ್ ವರೆಗೆ ದಾಖಲಾಗಿತ್ತು. ಇದೀಗ ಉಷ್ಣಾಂಶದಲ್ಲಿ ವಿಪರೀತ ಕುಸಿತ ಉಂಟಾಗಿದ್ದು ಸತತ ಮಳೆ ಸುರಿಯುತ್ತಿದೆ.ಬಿಸಿಲಿನಿಂದ ಬೆಂದು ಹೋಗಿದ್ದ ಜನತೆಗೆ ಕೊಂಚ ತಂಪೆಸಗಿದೆ.
ಭಾರೀ ಮಳೆಯಿಂದಾಗಿ ಭಾರತ ಭೇಟಿಯಲ್ಲಿರುವ ಅಮೆರಿಕ ರಾಜ್ಯ ಕಾರ್ಯದರ್ಶಿ ಜಾನ್ ಕೆರ್ರಿ ದೆಹಲಿ ಸುತ್ತಮುತ್ತ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವ ಯೋಜನೆಯನ್ನು ರದ್ದುಗೊಳಿಸಿದ್ದಾರೆ. ದೆಹಲಿ ಐಐಟಿಗೆ ಭೇಟಿ ನೀಡುವ ಕಾರ್ಯಕ್ರಮ ಕೂಡ ರದ್ದಾಗಿದೆ.
ಮಳೆಯ ವಿವರಗಳನ್ನು ಟ್ವಿಟ್ಟರ್ ನಲ್ಲಿ ದೆಹಲಿ ನಾಗರಿಕರು ನೀಡುತ್ತಿದ್ದಾರೆ. ವಿಮಾನ ಹಾರಾಟ, ರಸ್ತೆ ಸಾರಿಗೆ ಸಂಚಾರಕ್ಕೆ ವ್ಯತ್ಯಯವುಂಟಾಗಿದೆ.ದೆಹಲಿ, ಗುರುಂಗಾವ್ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗಿದೆ. ಆಫೀಸಿಗೆ, ತಮ್ಮ ವ್ಯಾಪಾರ-ವಹಿವಾಟುಗಳಿಗೆ ತೆರಳುವ ನಾಗರಿಕರು ಭಾರೀ ಮಳೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಗಂಟೆಗಟ್ಟಲೆ ಟ್ರಾಫಿಕ್ ನಲ್ಲಿ ವಾಹನ ಸವಾರರು ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿದೆ.
ಗುರುಂಗಾವ್ ಪೊಲೀಸರು ಟ್ವೀಟ್ ಮಾಡಿ, ನಾಗರಿಕರೇ ತಾಳ್ಮೆಯಿಂದ ಕಾಯಿರಿ, ನಾವು ನಾಗರಿಕರ ಅನುಕೂಲಕ್ಕೆ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎನ್ನುತ್ತಿದ್ದಾರೆ.
ಹವಾಮಾನ ಇಲಾಖೆಯ ವರದಿ ಪ್ರಕಾರ, ಗುಡುಗು-ಮಿಂಚಿನಿಂದ ಕೂಡಿದ ಭಾರೀ ಮಳೆ ದೆಹಲಿಯ ವಾಯುವ್ಯ, ದಕ್ಷಿಣ ಮತ್ತು ಆಗ್ನೇಯ ಭಾಗಗಳಲ್ಲಿ ಮುಂದಿನ ಎರಡು ಗಂಟೆಗಳವರೆಗೆ ಸುರಿಯಲಿದೆ.
ಇನ್ನೊಂದೆಡೆ ಹೈದರಾಬಾದಿನಲ್ಲಿ ಕೂಡ ಇಂದು ಬೆಳಗ್ಗೆಯಿಂದಲೇ ಸತತ ಮಳೆ ಸುರಿಯುತ್ತಿದ್ದು, ಜನರು ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos