ರಾಹುಲ್ ಗಾಂಧಿ ಮತ್ತು ಆರ್ ಎಸ್ ಎಸ್ ಮಾನಹಾನಿ ಜಟಾಪಟಿ
ನವದೆಹಲಿ: 'ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜನರೇ ಮಹಾತ್ಮ ಗಾಂಧಿಯನ್ನು ಕೊಂದದ್ದು' ಎಂಬ ತಮ್ಮ ಹೇಳಿಕೆಗೆ ಬದ್ಧರಾಗಿದ್ದು, ಈ ವಿಷಯವಾಗಿ ಆರ್ ಎಸ್ ಎಸ್ ತಮ್ಮ ಮೇಲೆ ಹೂಡಿರುವ ಮಾನನಷ್ಟ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ನಲ್ಲಿ ಎದುರಿಸಲಿದ್ದೇನೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
2014 ರಲ್ಲಿ ಚುನಾವಣಾ ಪ್ರಚಾರ ಭಾಷಣದಲ್ಲಿ ರಾಹುಲ್, ಮಹಾತ್ಮಾ ಗಾಂಧಿ ಹತ್ಯೆಗೆ ಆರ್ ಎಸ್ ಎಸ್ ನನ್ನ ದೂಷಿಸಿದ್ದರು. ಇದನ್ನು ಪ್ರಶ್ನಿಸಿ ಆರ್ ಎಸ್ ಎಸ್ ರಾಹುಲ್ ವಿರುದ್ಧ ಮಾನನಷ್ಟ ಮೊಕ್ಕದ್ದಮೆ ಹೂಡಿತ್ತು.
ಕಳೆದ ಬಾರಿಯ ವಿಚಾರಣೆಯಲ್ಲಿ, ರಾಹುಲ್ ಪರವಾಗಿ ವಾದಿಸಿದ್ದ ಕಪಿಲ್ ಸಿಬಲ್, ರಾಹುಲ್ ಗಾಂಧಿ ಆರ್ ಎಸ್ ಎಸ್ ಸಂಘಟನೆಯಾಗಿ ಮಹಾತ್ಮ ಗಾಂಧಿ ಹತ್ಯೆಗೆ ಕಾರಣ ಎಂದಿಲ್ಲ ಬದಲಾಗಿ ಆರ್ ಎಸ್ ಎಸ್ ನ ಜನರನ್ನು ದೂಷಿಸಿದ್ದರು ಆದರೆ ಜನರು ಆರ್ ಎಸ್ ಎಸ್ ಗೆ ಸಂಬಂಧ ಬೆಸೆದಿದ್ದರು ಎಂದು ತಿಳಿಸಿದ್ದರು. ಆದರೆ ಆರ್ ಎಸ್ ಎಸ್ ರಾಹುಲ್ ಗಾಂಧಿ ಅವರಿಂದ ಲಿಖಿತ ಕ್ಷಮಾಪಣೆಗಾಗಿ ಆಗ್ರಹಿಸಿತ್ತು.
ಸ್ವಲ್ಪ ದಿನಗಳ ಹಿಂದೆ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ ತಮ್ಮ ಭಾಷಣದ ತುಣುಕನ್ನು ಪ್ರಕಟಿಸಿ ತಮ್ಮ ಹೇಳಿಕೆಗೆ ಬದ್ಧ ಎಂದಿದ್ದರು ಮತ್ತು ಈಗ ವಿಚಾರಣೆಗೆ ಸಿದ್ಧ ಎಂದು ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದಾರೆ.