ನವದೆಹಲಿ: ದಿನಗೂಲಿ ನೌಕರರ ವೇತನ ಹೆಚ್ಚಳವೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೇಂದ್ರ ನೌಕರರ ಒಕ್ಕೂಟ ಭಾರತ್ ಬಂದ್ ಗೆ ಕರೆ ನೀಡಿದೆ.
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಆರ್ಥಿಕ ಕಾನೂನುಗಳನ್ನು ವಿರೋಧಿಸಿ 10 ಕಾರ್ಮಿಕ ಸಂಘಟನೆಗಳು ಶುಕ್ರವಾರ ಭಾರತ್ ಬಂದ್ ಗೆ ಕರೆ ನೀಡಿದ್ದು, ನಾಳೆ ದೇಶವ್ಯಾಪಿ ಬೃಹತ್ ಮುಷ್ಕರದ ಹಿನ್ನೆಲೆಯಲ್ಲಿ ಏನಿರುತ್ತೆ...ಏನಿರಲ್ಲ ಎಂಬ ವಿವರ ಇಲ್ಲಿದೆ...
ಕೇಂದ್ರ ನೌಕರರ ಒಕ್ಕೂಟ ಕರೆ ನೀಡಿರುವ ಭಾರತ್ ಬಂದ್ ಗೆ ಸರ್ಕಾರಿ ಸಾರಿಗೆ ನೌಕರರ ಒಕ್ಕೂಟ ಕೂಡ ಬೆಂಬಲ ನೀಡಿದ್ದು, ಬಿಎಂಟಿಸಿ, ಕೆಎಸ್ಆರ್ ಟಿಸಿ ಬಸ್ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಆದರೆ ಮೆಟ್ರೋ ಸಂಚಾರ ಎಂದಿನಂತೆ ಇರಲಿದೆ. ಸರ್ಕಾರಿ ನೌಕರರ ಒಕ್ಕೂಟ ಬಂದ್ ಗೆ ಬೆಂಬಲ ನೀಡಿರುವುದರಿಂದ ಅಂಚೆ ಕಚೇರಿ, ವಿಮಾ ಕಚೇರಿಗಳು ಸೇರಿದಂತೆ ಎಲ್ಲ ರೀತಿಯ ಸರ್ಕಾರಿ ಕಚೇರಿಗಳು ಕೂಡ ಸ್ಥಗಿತಗೊಳ್ಳಲಿವೆ. ಮುಂಜಾಗ್ರತಾ ಕ್ರಮವಾಗಿ ಖಾಸಗಿ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಸರ್ಕಾರಿ ಶಾಲಾ ಕಾಲೇಜುಗಳ ರಜೆ ಬಗ್ಗೆ ಅಂತಿಮ ನಿರ್ಧಾರ ಇನ್ನೂ ಹೊರಬಿದ್ದಿಲ್ಲ.
ಆಟೋ ಸಂಚಾರ ಕೂಡ ವಿರಳವಾಗಲಿದ್ದು, ಟ್ಯಾಕ್ಸಿ, ಕ್ಯಾಬ್ ಸೇವೆ ಸ್ಥಗಿತಗೊಳ್ಳಲಿವೆ. ಉಳಿದಂತೆ ಹಾಲು ಮಾರಾಟ ಕೇಂದ್ರ, ಮೆಡಿಕಲ್ ಶಾಪ್, ಆಸ್ಪತ್ರೆ ಸೇವೆ ಲಭ್ಯಲವಿರಲಿದ್ದು, ಇದಲ್ಲದೆ ಖಾಸಗಿ ಬಸ್ ಸೇವೆ ಎಂದಿನಂತೆ ಇರಲಿದೆ. ಅಂತೆಯೇ ಆಂಬುಲೆನ್ಸ್ ಸಂಚಾರಕ್ಕೆ ಯಾವ ತೊಂದರೆ ಇರುವುದಿಲ್ಲ. ಎಟಿಎಂ ಸೌಲಭ್ಯ ಎಂದಿನಂತೆ ಇರಲಿದ್ದು, ಚಿತ್ರಮಂದಿರಗಳು ತೆರೆದಿರಲಿವೆ. ಹೊಟೆಲ್ ಮಾಲೀಕರ ಒಕ್ಕೂಟ ಬಂದ್ ಗೆ ಕುರಿತಂತೆ ಈವರೆಗೂ ಯಾವುದೇ ರೀತಿ ನಿರ್ಧಾರಕ್ಕೆ ಬಾರದೇ ಇರುವುದು ನಾಳೆ ಹೋಟೆಲ್ ವಹಿವಾಟಿನ ಮೇಲೆ ಪರಿಣಾಮ ಬೀರುವುದಿಲ್ಲ ಎಂದೆಣಿಸಲಾಗುತ್ತಿದೆ.
ಇನ್ನು ಹಾಲಿ ಬಂದ್ ನಿಂದ ಭಾರತೀಯ ರೈಲ್ವೇಯನ್ನು ಹೊರಗಿಡಲಾಗಿದ್ದು, ರೈಲು ಸಂಚಾರದ ಮೇಲೆ ಅಷ್ಟೇನೂ ವ್ಯತ್ಯಾಸವಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ಇನ್ನು ಗಣೇಶ ಹಬ್ಬದ ಬೆನ್ನಲ್ಲೇ ಭಾರತ್ ಬಂದ್ ಗೆ ಕರೆ ನೀಡಿರುವುದರಿಂದ ದೂರದೂರಿಗೆ ಪ್ರಯಾಣ ಮಾಡುವವರು ಖಾಸಗಿ ವಾಹನಗಳ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ. ನಾಳೆ ಬೆಳಗ್ಗೆ 6ಗಂಟೆಯಿಂದ ಸಂಜೆ 6ಗಂಟೆವರೆಗೆ ಮುಷ್ಕರ ನಡೆಯಲಿದ್ದು, ಆ ನಿಟ್ಟಿನಲ್ಲಿ ಸಾರಿಗೆ ವ್ಯವಸ್ಥೆ ಸೇರಿದಂತೆ ಅಗತ್ಯ ಸೇವೆಗಳ ವ್ಯತ್ಯಯವಾಗಲಿದೆ.