ದೇಶ

ನಗದು ರಹಿತ ಪಾವತಿಗೆ ಇನ್ಮುಂದೆ ಆಧಾರ್ ಕಾರ್ಡ್, ಮೊಬೈಲ್ ನಂಬರ್ ಇದ್ದರೆ ಸಾಕು!

Srinivas Rao BV
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಗದು ರಹಿತ ವಹಿವಾಟು, ಪಾವತಿಯನ್ನು ಪ್ರೋತ್ಸಾಹಿಸಲು ಮುಂದಾಗಿದ್ದು, ಆಧಾರ್ ಸಹ ಇದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. 
ಆನ್ ಲೈನ್ ಪೇಮೆಂಟ್( ನಗದು ರಹಿತ ಪಾವತಿ)ಗೆ ಅನುಕೂಲವಾಗುವಂತೆ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ ಬಯೋಮೆಟ್ರಿಕ್ ದೃಢೀಕರಣ ಸಾಮರ್ಥ್ಯವನ್ನು ಪ್ರತಿ ದಿನಕ್ಕೆ 10 ಕೋಟಿಯಿಂದ 40 ಕೋಟಿಗೆ ಏರಿಕೆ ಮಾಡಲು ಯೋಜನೆ ರೂಪಿಸಿದೆ. 
ವ್ಯಾಪಾರಿಗಳು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಪಾಸ್ವರ್ಡ್ ಗಳ ಹೊರತಾಗಿ ಆಧಾರ್ ಆಧಾರಿತ ಪಾವತಿಯನ್ನು ಸ್ವೀಕರಿಸಲು ಸಾಧ್ಯವಾಗುವಂತಹ ಮೊಬೈಲ್ ಫೋನ್ ಆಪ್ ನ್ನು ಸರ್ಕಾರ ಅಭಿವೃದ್ಧಿಗೊಳಿಸುತ್ತಿದ್ದು, ಮೊಬೈಲ್ ಆಪ್ ಮೂಲಕ ಮೊಬೈಲ್ ಹ್ಯಾಂಡ್ ಸೆಟ್ ನ್ನು ಆಧಾರ್ ಆಧಾರಿತ ವಹಿವಾಟುಗಳ ವೇಳೆ ಬಯೋಮೆಟ್ರಿಕ್ ದೃಢೀಕರಣಕ್ಕೆ ಬಳಕೆ ಮಾಡುವುದು ಉದ್ದೇಶವಾಗಿದೆ. 
ಆಧಾರ್ ಆಧಾರಿತ ಪಾವತಿ ಬಗ್ಗೆ ಮಾಹಿತಿ ನೀಡಿರುವ ಯುಐಡಿಎಐ ಕಾರ್ಯನಿರ್ವಹಣಾಧಿಕಾರಿ ಅಜಯ್ ಭೂಷಣ್ ಪಾಂಡೆ ಯುಐಡಿಎಐ ಕ್ರಮೇಣವಾಗಿ ತನ್ನ ಬಯೋಮೆಟ್ರಿಕ್ ದೃಢೀಕರಣ ಸಾಮರ್ಥ್ಯವನ್ನು 10 ಕೋಟಿಯಿಂದ 40 ಕೋಟಿಗೆ ಏರಿಕೆ ಮಾಡಲಿದೆ, ಈ  ವ್ಯವಹಾರಗಳ ಕ್ರಮದ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುವುದು, ಡಿ.1 ರಂದೇ 1.31 ಕೋಟಿ ಆಧಾರ್ ಅಂಗೀಕೃತ ಬಯೋಮೆಟ್ರಿಕ್ ದೃಢೀಕರಣವಾಗಿರುವ ಬಗ್ಗೆ ವರದಿಗಳು ಬಂದಿವೆ ಎಂದು ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ.
ಹೊಸ ಕ್ರಮದ ಬಗ್ಗೆ ಮಾಹಿತಿ ನೀಡಿರುವ ಅಜಯ್ ಭೂಷಣ್ ಪಾಂಡೆ, ಬಯೋಮೆಟ್ರಿಕ್ ದೃಢೀಕರಣ ಸರ್ಕಾರಿ ಅಧಿಕಾರಿಗಳ ಹಾಜರಾತಿಯ ವಿವರಗಳನ್ನೂ ಒಳಗೊಂಡಿರಲಿದ್ದು, ನೋಟು ನಿಷೇಧ, ಕಪ್ಪುಹಣ ತಡೆಗೆ ಕೈಗೊಳ್ಳಲಾಗುವ ಕ್ರಮಗಳಿಗೆ ನೆರವಾಗಲಿದೆ. ಅಷ್ಟೇ ಅಲ್ಲದೇ ಹಣಕಾಸು ಪಾರದರ್ಶಕತೆಗೂ ಸಹಕಾರಿಯಾಗಲಿದೆ ಎಂದು ಭೂಷಣ್ ಪಾಂಡೆ ಹೇಳಿದ್ದಾರೆ. 
SCROLL FOR NEXT