ಕಾಂಗ್ರೆಸ್ ಸಂಸದೀಯ ಸದಸ್ಯರ ಸಭೆಗೆ ಆಗಮಿಸಿದ ರಾಹುಲ್ ಗಾಂಧಿಯವರನ್ನು ಬರಮಾಡಿಕೊಂಡ ಕಾಂಗ್ರೆಸ್ ಸದಸ್ಯರು
ನವದೆಹಲಿ: ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆ ಶುಕ್ರವಾರ ಬೆಳಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಡೆಯಿತು.
ಕೇಂದ್ರ ಸರ್ಕಾರ ನೋಟುಗಳ ಅಪಮೌಲ್ಯಗೊಳಿಸಿ ದ್ದರ ವಿರುದ್ಧ, ನಗ್ರೊತಾ ಭಯೋತ್ಪಾದಕ ದಾಳಿ ವಿಷಯದಲ್ಲಿ ಕೇಂದ್ರ ಸರ್ಕಾರವನ್ನು ಸಂಪೂರ್ಣ ತರಾಟೆಗೆ ತೆಗೆದುಕೊಳ್ಳಲು ತಂತ್ರಗಾರಿಕೆ ನಡೆಸುವ ಕುರಿತು ಸಭೆಯಲ್ಲಿ ಕಾಂಗ್ರೆಸ್ ಸಂಸದರು ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕಾಶ್ಮೀರ ಹೊತ್ತಿ ಉರಿಯುತ್ತಿರುವಾಗ ನಮ್ಮನ್ನು ಅಪಹಾಸ್ಯ ಮಾಡುತ್ತಿದ್ದ ವ್ಯಕ್ತಿ ಇಂದು ಮೌನವಾಗಿ ಕುಳಿತಿದ್ದಾರೆ. ಕೇಂದ್ರ ಸರ್ಕಾರದ ಸರ್ಜಿಕಲ್ ಸ್ಟ್ರೈಕ್ ನಂತರ ಜಮ್ಮು-ಕಾಶ್ಮೀರ ಮತ್ತು ಗಡಿ ಪ್ರದೇಶದಲ್ಲಿ 21 ಪ್ರಮುಖ ದಾಳಿಗಳು ಮತ್ತು ನೂರಾರು ಸಲ ಕದನ ವಿರಾಮ ಉಲ್ಲಂಘನೆಯಾಗಿದೆ, ತಮ್ಮ ವೈಯಕ್ತಿಕ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳಲು, ತಮ್ಮನ್ನು ರಕ್ಷಿಸಿಕೊಳ್ಳಲು ದೇಶದ ಜನತೆಗೆ ನೋವು ನೀಡುವ ಪ್ರಧಾನಿಯನ್ನು ಭಾರತ ಇದುವರೆಗೆ ಕಂಡಿಲ್ಲ. ಕಾಂಗ್ರೆಸ್ ಯಾವತ್ತಿಗೂ ತಮ್ಮ ಕಲ್ಪನೆಯ ಪ್ರಧಾನಿಯನ್ನು ದೇಶಕ್ಕೆ ಕೊಟ್ಟಿಲ್ಲ, ಆದರೆ ಮೋದಿಯವರು ತಮ್ಮದೇ ಕಲ್ಪನೆಯಲ್ಲಿ ಬಂಧಿಯಾಗಿದ್ದಾರೆ ಎಂದು ಆರೋಪಿಸಿದರು.
ಜನಪ್ರಿಯತೆ ಗಳಿಸಲು ಪ್ರಧಾನಿಯವರು ಯೋಜನಾ ತಂತ್ರಗಾರಿಕೆಯನ್ನು ರೂಪಿಸುತ್ತಿದ್ದಾರೆ. ಸಂಸದೀಯ ಪ್ರಜಾಪ್ರಭುತ್ವಕ್ಕೆ ಮಂಕು ಕವಿದಿದ್ದು, ಸಂಸತ್ತಿನಲ್ಲಿ ಕೇವಲ ಗಂಭೀರ ಭರವಸೆಗಳನ್ನು ಮಾತ್ರ ನೀಡುತ್ತಿದ್ದೀರೆ ಹೊರತು ಅವುಗಳನ್ನು ಈಡೇರಿಸುವ ಬಗ್ಗೆ ಪ್ರಯತ್ನ ಮಾಡುತ್ತಿಲ್ಲ ಎಂದರು.
ಪ್ರಧಾನಿಯವರ ಆಡಂಬರದ ಪ್ರದರ್ಶನ ಮತ್ತು ಅದಕ್ಷತೆಯಿಂದಾಗಿ ದೇಶ ಸಾಕಷ್ಟು ಹಾನಿ ಅನುಭವಿಸಿದೆ ಎಂದು ಕೂಡ ದೂರಿದರು.ನೋಟುಗಳನ್ನು ರದ್ದು ಮಾಡುವ ಮೊದಲು ಅದರ ಪರಿಣಾಮದ ಬಗ್ಗೆ ಯೋಚಿಸದೆ ಪ್ರಧಾನಿಯವರು ನಿರ್ಧಾರ ತೆಗೆದುಕೊಂಡಿದ್ದಾರೆ. ಒಬ್ಬರ ಬಳಿಯೇ ಅಧಿಕಾರ ಕೇಂದ್ರೀಕೃತವಾಗುವುದು ದೇಶದ ಭವಿಷ್ಯಕ್ಕೆ ಒಳ್ಳೆಯದಲ್ಲ. ನೋಟುಗಳ ಅಪಮೌಲ್ಯ ಅವರ ಅಧಿಕಾರದ ಕೇಂದ್ರೀಕರಣವನ್ನು ಸೂಚಿಸುತ್ತದೆ ಎಂದರು.
ನೋಟುಗಳ ಅಪಮೌಲ್ಯದ ನಂತರ ದೇಶದ ಆರ್ಥಿಕತೆ ಊಹೆ ಮಾಡಲು ಸಾಧ್ಯವಾಗದ ರೀತಿಯಲ್ಲಿ ಹಾನಿಯನ್ನುಂಟುಮಾಡಿದೆ. ದಿನಕೂಲಿ ನೌಕರರು, ರೈತರು, ಕಾರ್ಮಿಕರು, ಮೀನುಗಾರರು ಇದರಿಂದ ಭಾರೀ ತೊಂದರೆ ಅನುಭವಿಸಿದ್ದಾರೆ ಎಂದರು.
ಈ ಮಧ್ಯೆ, ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಸದನಗಳಲ್ಲಿ ಇಂದು ಕೂಡ ವಿರೋಧ ಪಕ್ಷಗಳ ಗದ್ದಲ, ಪ್ರತಿಭಟನೆ ಮುಂದುವರಿದಿದೆ.
ನಿನ್ನೆ ಲೋಕಸಭೆಯಲ್ಲಿ ಯಾವುದೇ ರೀತಿಯ ಚರ್ಚೆ ನಡೆಸದೆ ಅಥವಾ ತಿದ್ದುಪಡಿಗೆ ಅವಕಾಶ ನೀಡದೆ ಲೋಕಸಭೆಯ ಮೂಲಕ ತೆರಿಗೆ ಕಾನೂನುಗಳ ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದರ ಬಗ್ಗೆ ಧ್ಯಪ್ರವೇಶಿಸಬೇಕೆಂದು ಕೋರಿ ರಾಹುಲ್ ಗಾಂಧಿ ನಿನ್ನೆ 16 ಮಂದಿ ವಿರೋಧ ಪಕ್ಷದ ನಾಯಕರೊಡಗೂಡಿ ರಾಷ್ಟ್ರಪತಿ ಪ್ರಣಬ್ ಖರ್ಜಿಯವರನ್ನು ಭೇಟಿ ಮಾಡಿದ್ದರು.
ರಾಜ್ಯಸಭೆಯಲ್ಲಿ ಪ್ರಧಾನಿಯವರು ನೋಟುಗಳ ರದ್ದತಿ ಕುರಿತು ಹೇಳಿಕೆ ನೀಡಬೇಕೆಂದು ನಿನ್ನೆ ಪ್ರತಿಪಕ್ಷದ ಸದಸ್ಯರು ಗದ್ದಲ ನಡೆಸಿದ್ದರು. ಆ ಬಳಿಕ ಪ್ರಧಾನಿಯವರು ಅಪರಾಹ್ನ ರಾಜ್ಯಸಭೆ ಕಲಾಪಕ್ಕೆ ಹಾಜರಾಗಿ ಕಲಾಪ ಮುಂದೂಡುವವರೆಗೆ ಇದ್ದರು.