ನಾಪತ್ತೆಯಾಗಿರುವ ವ್ಯಾಪಾರಿ ಮಹೇಶ್ ಶಾ
ಅಹಮದಾಬಾದ್: ಕಳೆದ ಅಕ್ಟೋಬರ್ ನಲ್ಲಿ ದಾಖಲೆಗಳಿಲ್ಲದ ಬರೊಬ್ಬರಿ 13 ಸಾವಿರ ಕೋಟಿ ರುಪಾಯಿ ಕಪ್ಪುಹಣವನ್ನು ಘೋಷಿಸಿಕೊಂಡಿದ್ದ ಅಹಮದಾಬಾದ್ ಮೂಲದ ವ್ಯಾಪಾರಿ ಮಹೇಶ್ ಶಾ ನಾಪತ್ತೆಯಾಗಿದ್ದಾರೆ.
ಕೇಂದ್ರ ಸರ್ಕಾರದ ಆದಾಯ ಘೋಷಣೆ ಯೋಜನೆ(ಐಡಿಎಸ್)ಯಡಿ ಕಪ್ಪುಹಣವನ್ನು ಘೋಷಿಸಿಕೊಂಡಿದ್ದ ಶಾ ಗಾಗಿ ಆದಾಯ ತೆರಿಗೆ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.
ಘೋಷಿಸಿಕೊಂಡಿದ್ದ ಹಣದ ಪೈಕಿ ಶೇ.25ರಷ್ಟು ಜಮೆ ಮಾಡಲು ವಿಫಲವಾಗಿದ್ದ 45 ವರ್ಷದ ವ್ಯಾಪಾರಿ ಕೆಲವು ದಿನಗಳಿಂದ ನಾಪತ್ತೆಯಾಗಿದ್ದು, ಆದಾಯ ತೆರಿಗೆ ಅಧಿಕಾರಿಗಳು ಈಗಾಗಲೇ ಶಾ ಅವರ ಮನೆ, ಕಚೇರಿ ಹಾಗೂ ಕಪ್ಪು ಹಣ ಘೋಷಿಸಿಕೊಳ್ಳಲು ಸಹಕರಿಸಿದ ಸಿಎ ತೆಹ್ಮುಲ್ ಸೆತ್ನಾ ಅವರ ಮನೆಯಲ್ಲೂ ಶೋಧ ನಡೆಸಿದ್ದಾರೆ.
ಐಡಿಎಸ್ ಯೋಜನೆಯಡಿ ಕಪ್ಪುಹಣ ಘೋಷಿಸಿಕೊಂಡವರಿಗೆ ತೆರಿಗೆ ಹಣದ ಕಂತನ್ನು ಪಾವತಿಸಿದಾಕ್ಷಣ ಆದಾಯ ತೆರಿಗೆ ಇಲಾಖೆಯ ಕಾನೂನು ಕ್ರಮಗಳಿಂದ ರಕ್ಷಣೆ ಸಿಗುತ್ತದೆ. ಅದರಂತೆ ಕಾಳಧನ ಘೋಷಿಸಿಕೊಂಡಿದ್ದ ಮಹೇಶ್ ಮೊದಲ ಕಂತಿನ ಕೇವಲ 975 ಕೋಟಿ ರುಪಾಯಿ ತೆರಿಗೆ ಪಾವತಿಸುವಲ್ಲಿ ವಿಫಲರಾಗಿದ್ದಾರೆ.
ಮಹೇಶ್ ಶಾ ಅಲ್ಪ ತೆರಿಗೆ ಕಟ್ಟುವಲ್ಲಿ ವಿಫಲರಾಗಿದ್ದು ಯಾಕೆ ಎಂದು ಶೋಧ ಕಾರ್ಯದಲ್ಲಿ ತೊಡಗಿದಾಗ ಅಧಿಕಾರಿಗಳಿಗೆ ತಿಳಿದ ವಿಚಾರವೆಂದರೆ. ಉದ್ಯಮಿ ಶಾ ಅಹಮದಾಬಾದ್ ನ ಹಲವು ದೊಡ್ಡ ದೊಡ್ಡ ಕಾಳಧನಿಕರ ಪರವಾಗಿ 13 ಸಾವಿರ ಕೋಟಿ ಕಪ್ಪುಹಣವನ್ನು ಘೋಷಿಸಿಕೊಂಡಿದ್ದ ಎನ್ನಲಾಗಿದೆ.