ನೋಟು ನಿಷೇಧ: ಕನಿಷ್ಠ ಪರಿಣಾಮ ಎದುರಿಸಿದ ನಗರಗಳ ಪಟ್ಟಿಯಲ್ಲಿ ಬೆಂಗಳೂರು!
ಬೆಂಗಳೂರು: ನ.8ರಂದು ಕೇಂದ್ರ ಸರ್ಕಾರ ಘೋಶಿಸಿದ ನೋಟು ನಿಷೇಧ ಕ್ರಮದಿಂದ ದೇಶಾದ್ಯಂತ ನಗದು ಅಭಾವ ಎದುರಾಗಿತ್ತು. ಆದರೆ ಕೆಲವು ನಗರಗಳು ಮಾತ್ರ ನೋಟು ನಿಷೇಧದ ನಿರ್ಧಾರದ ಹೊರತಾಗಿಯೂ ಕನಿಷ್ಠ ಪರಿಣಾಮ ಎದುರಿಸಿವೆ. ಈ ಪಟ್ಟಿಯಲ್ಲಿ ಬೆಂಗಳೂರು ಸಹ ಸ್ಥಾನ ಪಡೆದಿದೆ.
ಬೆಂಗಳೂರು ನಗರ ಪ್ರಧಾನವಾಗಿ ನಗದು ವಹಿವಾಟುಗಳಲ್ಲಿ ಹೆಚ್ಚಿನ ಪಾರದರ್ಶಕತೆ ಹೊಂದಿದ್ದ ಹಿನ್ನೆಲೆಯಲ್ಲಿ ನೋಟು ನಿಷೇಧದ ತೀರ್ಮಾನದಿಂದ ಕನಿಷ್ಠ ಪರಿಣಾಮಗಳನ್ನು ಎದುರಿಸಿದೆ ಎಂದು ಭಾರತದ ರಿಯಲ್ ಎಸ್ಟೇಟ್ ಡೆವಲಪರ್ ಒಕ್ಕೂಟ(ಸಿಆರ್ ಇಡಿಎಐ) ಹೇಳಿದೆ.
ಇನ್ನು ನೋಟು ನಿಷೇಧದ ಪರಿಣಾಮದಿಂದ ರಿಯಲ್ ಎಸ್ಟೇಟ್ ದರಗಳು ಕಡಿಮೆಯಾಗಲಿದೆ ಎಂಬ ವದಂತಿಗಳನ್ನು ತಳ್ಳಿಹಾಕಿರುವ ಸಿಆರ್ ಇಡಿಎಐ ಅಧ್ಯಕ್ಷ ಇರ್ಫಾನ್ ರಜಾಕ್, ಈ ಊಹಾಪೋಹಗಳಿಗೆ ಯಾವುದೇ ಆಧಾರಗಳಿಲ್ಲ ಎಂದಿದ್ದಾರೆ. ಬೆಂಗಳೂರು ನಗರ ದೇಶದಲ್ಲೆ ಆಕರ್ಷಕ ಬೆಲೆಯ ಮಾರುಕಟ್ಟೆಗಳನ್ನು ಹೊಂದಿರುವ ನಗರಗಳ ಪೈಕಿ ಒಂದಾಗಿದೆ. ನೋಟು ನಿಷೇಧದಿಂದ ಸಣ್ಣ ಹಾಗೂ ಸಂಘಟಿತ ಕ್ಷೇತ್ರಗಳ ಸಂಸ್ಥೆಗಳಿಗೆ ನ್ಯಾಯೋಚಿತ ಪೈಪೋಟಿಯನ್ನು ಎದುರಿಸಲು ಸಹಕಾರಿಯಾಗಲಿದ್ದು ಆರೋಗ್ಯಕರ ಪೈಪೋಟಿಯನ್ನು ನಿರೀಕ್ಷಿಸಬಹುದು ಎಂದು ರಜಾಕ್ ಅಭಿಪ್ರಾಯಪಟ್ಟಿದ್ದಾರೆ.
ಸಿಆರ್ ಇಡಿಎಐ ಬೆಂಗಳೂರು ಹಾಗೂ ಶೋಭಾ ಲಿಮಿಟೆಡ್ ನ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಜೆಸಿ ಶರ್ಮಾ ನೋಟು ನಿಷೇಧದ ನಿರ್ಧಾರವನ್ನು ಸ್ವಾಗತಿಸಿದ್ದು, ಅತ್ಯುತ್ತಮ ಕ್ರಮ ಎಂದು ಬಣ್ಣಿಸಿದ್ದಾರೆ. ಹಾಗೆಯೇ ನೋಟು ನಿಷೇಧ ಕ್ರಮದಿಂದಾಗಿ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಉಂತಾಗುವುದಿಲ್ಲ ಎಂದು ಸಿಆರ್ ಇಡಿಎಐ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics