ಅಮೃತ್ ಸರ: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಪಂಜಾಬ್ ನಲ್ಲಿ ನಡೆಯುತ್ತಿರುವ ಹಾರ್ಟ್ ಆಫ್ ಏಷ್ಯಾ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿರುವ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ, ಪಾಕಿಸ್ತಾನವನ್ನು ಭಯೋತ್ಪಾದನೆ ಪಾಲಿನ ಸ್ವರ್ಗ ಎಂದು ಹೇಳಿದ್ದಾರೆ.
ಯುದ್ಧಪೀಡಿತ ನೆರೆರಾಷ್ಟ್ರ ಎಲ್ಲಿಯವರೆಗೂ ಭಯೋತ್ಪಾದನೆಯನ್ನು ಬೆಂಬಲಿಸುವುದೋ ಅಲ್ಲಿಯವರೆಗೂ ಎಷ್ಟೇ ಆರ್ಥಿಕ ನೆರವು ನೀಡಿದರೂ ಅಂತಹ ರಾಷ್ಟ್ರವನ್ನು ದೃಢವಾಗಿಸಲು ಸಾಧ್ಯವಾಗುವುದಿಲ್ಲ ಎಂದು ಅಶ್ರಫ್ ಘನಿ ಅಭಿಪ್ರಾಯಪಟ್ಟಿದ್ದಾರೆ. ಪಾಕಿಸ್ತಾನದಲ್ಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆ ಆಯ್ದ ಭಯೋತ್ಪಾದಕರನ್ನು ಮಾತ್ರ ಸ್ಥಳಾಂತರಗೊಳಿಸಿದೆ. ಸರ್ಕಾರಿ ಪ್ರಾಯೋಜಿತ ಭಯೋತ್ಪಾದಕರ ಅಭಯಾರಣ್ಯಗಳು ಪಾಕಿಸ್ತಾನದಲ್ಲಿ ಇವೆ ಎಂದಿದ್ದಾರೆ ಅಶ್ರಫ್ ಘನಿ
ಇದೇ ವೇಳೆ ಪಾಕಿಸ್ತಾನ ಅಫ್ಘಾನಿಸ್ತಾನಕ್ಕೆ 500 ಮಿಲಿಯನ್ ಡಾಲರ್ ಆರ್ಥಿಕ ನೆರವನ್ನು ನೀಡುವುದಾಗಿ ಹೇಳಿರುವುದನ್ನು ಸ್ವಾಗತಿಸಿರುವ ಅಶ್ರಫ್ ಘನಿ, ಸಮ್ಮೇಳನದಲ್ಲಿ ಭಾಗಿಯಾಗಿದ್ದ ಪಾಕ್ ಪ್ರತಿನಿಧಿ ಸರ್ತಾಜ್ ಅಜೀಜ್ ಅವರನ್ನುದ್ದೇಶಿಸಿ ಆರ್ಥಿಕ ನೆರವನ್ನು ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಬಳಕೆ ಮಾಡುತ್ತೀರಿ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಭಯೋತ್ಪಾದನೆಯಿಂದ ಅಫ್ಘಾನಿಸ್ತಾನದಲ್ಲಿ ಕಳೆದ ವರ್ಷ ಸಾವು ನೋವುಗಳ ಸಂಖ್ಯೆ ಹೆಚ್ಚಿದೆ. ಕೆಲವು ರಾಷ್ಟ್ರಗಳು ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅಶ್ರಫ್ ಘನಿ ಪಾಕಿಸ್ತಾನದ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.