ಅಮೃತ್ ಸರ: ಹಾರ್ಟ್ ಆಫ್ ಏಷ್ಯಾ-2016 ರಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಿದ್ದ ಪಾಕ್ ಪ್ರಧಾನಿಯ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಜೀಜ್, ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಪಾಕಿಸ್ತಾನ ಬದ್ಧವಾಗಿದೆ ಎಂದು ಹೇಳಿದ್ದು ಭಯೋತ್ಪಾದನೆಗೆ ಒಂದು ನಿರ್ದಿಷ್ಟ ರಾಷ್ಟ್ರವನ್ನು ದೂಷಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಭಯೋತ್ಪಾದನೆಯಿಂದ ಸಾಕಷ್ಟು ಸಾವು-ನೋವುಗಳು ಸಂಭವಿಸುತ್ತಿವೆ, ಉಗ್ರವಾದದ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸಬೇಕಿದ್ದು ಇದಕ್ಕಾಗಿ ಸಾಂಘಿಕ ಪ್ರಯತ್ನಗಳನ್ನು ಮೂಲಕ ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಸರ್ತಾಜ್ ಅಜೀಜ್ ಕರೆ ನೀಡಿದ್ದಾರೆ.
ಭಯೋತ್ಪಾದನೆ ವಿಚಾರವಾಗಿ ಒಂದು ರಾಷ್ಟ್ರವನ್ನು ದೂಷಿಸುವುದು ಸುಲಭ, ಆದರೆ ನಾವು ವಸ್ತುನಿಷ್ಠ ಮತ್ತು ಸಮಗ್ರವಾದ ದೃಷ್ಟಿಕೋನ ಹೊಂದಬೇಕಿದೆ ಎಂದು ಸರ್ತಾಜ್ ಅಜೀಜ್ ಅಭಿಪ್ರಾಯಪಟ್ಟಿದ್ದಾರೆ. ಹಾರ್ಟ್ ಆಫ್ ಏಷ್ಯಾ ಸಮ್ಮೇಳನದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಪಾಕಿಸ್ತಾನದ ಹೆಸರನ್ನು ನೇರವಾಗಿ ಪ್ರಸ್ತಾಪಿಸದೇ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿರುವುದಕ್ಕೆ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದ್ದರು.