ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ನಿರ್ಮಾಣವಾಗಿರುವ ವೈಮನಸ್ಸಿಗೆ ಅಂತ್ಯ ಹಾಡುವ ಯತ್ನಗಳು ನಡೆಯುತ್ತಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಪಾಕಿಸ್ತಾನ ಪ್ರಧಾನಮಂತ್ರಿ ಸಲಹೆಗಾರ ಸರ್ತಾಜ್ ಅಜೀಜ್ ಅವರು ಭಾರತದ ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ.
ಸರ್ಜಾಜ್ ಅಜೀಜ್ ಅವರು ಅಜಿತ್ ದೋವಲ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದು, ಅಜಿತ್ ದೋವಲ್ ಜೊತೆಗೆ ಮಾತುಕತೆ ನಡೆಸುವುದಕ್ಕಾಗಿ 16 ಗಂಟೆಗಳ ಮುಂಚಿತವಾಗಿ ಸರ್ತಾಜ್ ಅಜೀಜ್ ಅವರು ಭಾರತಕ್ಕೆ ಆಗಮಿಸಿದ್ದರು. ಭಾರತಕ್ಕೆ ಆಗಮಿಸಿದ ಬಳಿಕ ದೋವಲ್ ಅವರೊಂದಿಗೆ ಸರ್ತಾಜ್ 30 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆಂದು ಎಂದು ಹೇಳಲಾಗುತ್ತಿದೆ. ದೋವಲ್ ಜೊತೆಗೆ ಮಾತುಕತೆ ನಡೆಸಿದ ಬಳಿಕ ಸರ್ತಾಜ್ ಅವರು ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್ ಗೂ ಭೇಟಿ ನೀಡಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.
ದೋವಲ್ ಹಾಗೂ ಅಜೀಜ್ ಭೇಟಿ ಕುರಿತಂತೆ ಅಧಿಕೃತ ಮಾಹಿತಿಗಳು ತಿಳಿದುಬಂದಿಲ್ಲ. ಭೇಟಿ ತೀರ್ಮಾನವನ್ನು ಪಾಕಿಸ್ತಾನ ತೆಗೆದುಕೊಂಡಿತ್ತೋ ಅಥವಾ ಭಾರತದ ವತಿಯಿಂದಲೇ ಮಾತುಕತೆ ನಡೆಸಲಾಗಿತ್ತೋ ಎಂಬ ಸ್ಪಷ್ಟ ಮಾಹಿತಿಗಳು ಈ ವರೆಗೂ ತಿಳಿದುಬಂದಿಲ್ಲ. ಉರಿ ಉಗ್ರ ದಾಳಿ ಬಳಿಕ ಉಭಯ ರಾಷ್ಟ್ರಗಳ ಉನ್ನತಾಧಿಕಾರಿಗಳು ಮುಖಾಮುಖಿ ಭೇಟಿಯಾಗಿ ಮಾತುಕತೆ ನಡೆಸುತ್ತಿರುವುದು ಇದೇ ಮೊದಲಾಗಿದ್ದು, ಈ ಹಿನ್ನೆಲೆಯಲ್ಲಿ ಸಾಕಷ್ಟು ಅಚ್ಚರಿಗಳು ಹಾಗೂ ಕುತೂಹಲಗಳು ಮೂಡತೊಡಗಿವೆ.
ಹಾರ್ಟ್ ಆಫ್ ಏಷ್ಯಾ ಸಮ್ಮೇಳನ ಆರಂಭವಾಗುವುದಕ್ಕೂ ವಾರದ ಹಿಂದಷ್ಟೇ ಸರ್ತಾಜ್ ಅಜೀಜ್ ಅವರು ಹೇಳಿಕೆಯೊಂದನ್ನು ನೀಡಿದ್ದರು. ಭಾರತದೊಂದಿಗೆ ಮಾತುಕತೆ ನಡೆಸಲು ಪಾಕಿಸ್ತಾನ ಸಿದ್ಧವಿದೆ. ಶಾಂತಿಯುತ ಸಂದೇಶದೊಂದಿಗೆ ನಾನು ಭಾರತಕ್ಕೆ ಹೋಗುತ್ತಿದ್ದೇನೆಂದು ಹೇಳಿದ್ದರು.