ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಪಾಕಿಸ್ತಾನ ಕಾರಣವಲ್ಲ ಎಂದು ಮಾಜಿ ಸಿಎಂ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಹಿಜ್ಬುಲ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ ಭುಗಿಲೆದ್ದಿದ್ದ ಹಿಂಸಾಚಾರ ಸಂಬಂಧ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ವಿವಾದಾತ್ಮಕ ಹೇಳಿಕೆ ನೀಡಿದ್ದು, ಹಿಂಸಾಚಾರಕ್ಕೆ ಪಾಕಿಸ್ತಾನ ಕಾರಣವಲ್ಲ ಎಂದು ಹೇಳಿದ್ದಾರೆ. ಬಾರಾಮುಲ್ಲಾದಲ್ಲಿ ನಡೆದ ನ್ಯಾಷನಲ್ ಕಾನ್ಪರೆನ್ಸ್ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಒಮರ್ ಅಬ್ದುಲ್ಲಾ, "ಬುರ್ಹಾನ್‌ವಾನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ 100 ದಿನಗಳಿಗೂ ಹೆಚ್ಚು ಕಾಲ ನಡೆದ ಹಿಂಸಾಚಾರಕ್ಕೆ ಪಾಕಿಸ್ತಾನ ಕಾರಣವಲ್ಲ. ಇಲ್ಲಿನ ಸರ್ಕಾರ ರಾಜ್ಯದ ಜನರೊಂದಿಗೆ ಹೆಚ್ಚು ಬೆರೆಯದಿರುವ ಕಾರಣದಿಂದಲೇ ಇಲ್ಲಿ ದಂಗೆ ಹೆಚ್ಚಾಗಿದೆ. ವಿನಾ ಕಾರಣ ಪಾಕಿಸ್ತಾನವನ್ನು ದೂಷಿಸುವುದು ಬೇಡ ಎಂದು ಹೇಳಿದ್ದಾರೆ.
ಪಾಕಿಸ್ತಾನಕ್ಕೂ ಇಲ್ಲಿನ ಹಿಂಸಾಚಾರಕ್ಕೂ ಯಾವುದೇ ಸಂಬಂಧವಿಲ್ಲ. ಇಲ್ಲಿನ ಸಮಸ್ಯೆಗಳಿಗೆಲ್ಲಾ ಪಾಕಿಸ್ತಾನವೇ ಕಾರಣ ಎಂಬ ತಪ್ಪು ಕಲ್ಪನೆ ಬೇಡ. ಇಲ್ಲಿನ ಸಮಸ್ಯೆಗಳಿಗೆ ನಾವೇ ಹೊಣೆಯೇ ಹೊರತು ಹೊರಗಿನವರಲ್ಲ. ಇತಿಹಾಸದಲ್ಲಿ ಮಾಡಿರುವ ತಪ್ಪುೃಗಳು ಹಾಗೂ ನೀಡಿದ ಭರವಸೆಗಳನ್ನು ಈಡೇರಿಸದಿರುವುದರ ಪರಿಣಾಮ ಇಲ್ಲಿ ಗಲಭೆಗಳು ಹೆಚ್ಚಾಗಿವೆ. ಕೇಂದ್ರ ಸರ್ಕಾರ ಕಾಶ್ಮೀರ ವಿಚಾರವಾಗಿ ನಿರ್ಲಕ್ಷ್ಯ ಧೋರಣೆ ತಳೆದಿರುವುದೂ ಕೂಡ ಹಿಂಸಾಚಾರಕ್ಕೆ ಕಾರಣ ಎಂದು ಸರ್ಕಾರದ ವಿರುದ್ಧ ಒಮರ್ ವಾಗ್ದಾಳಿ ನಡೆಸಿದ್ದಾರೆ.
ಇತ್ತ ಒಮರ್ ಅಬ್ದುಲ್ಲಾ ಅವರ ಹೇಳಿಕೆ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.