ದೇಶ

ಬುಲಂದ್‌ಶಹರ್‌ ಸಾಮೂಹಿಕ ಅತ್ಯಾಚಾರ ಪ್ರಕರಣ: ಅಜಂಖಾನ್ ಕ್ಷಮೆ ತಿರಸ್ಕರಿಸಿದ ಸುಪ್ರೀಂ

Manjula VN

ನವದೆಹಲಿ: ಬುಲಂದ್‌ಶಹರ್‌ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಉತ್ತರ ಪ್ರದೇಶ ಸಚಿವ ಅಜಂಖಾನ್ ಅವರ ಬೇಷರತ್ ಕ್ಷಮೆಯಾಚನೆಯನ್ನು ಸುಪ್ರೀಂಕೋರ್ಟ್ ಬುಧವಾರ ನಿರಾಕರಿಸಿದೆ.

ಬುಲಂದ್ ಶೆಹರ್ ನ ಹೆದ್ದಾರಿಯೊಂದರಲ್ಲಿ ಹೋಗುತ್ತಿದ್ದ ಕಾರೊಂದನ್ನು ತಡೆದಿದ್ದ ದರೋಡೆಕೋರರ ಗುಂಪೊಂದು, ಕಾರಿನಲ್ಲಿದ್ದ ತಾಯಿ ಮತ್ತು ಮಗಳನ್ನು ಹೊರಗೆಳೆದು ಸಾಮೂಹಿಕವಾಗಿ ಅತ್ಯಾಚಾರ ನಡೆಸಿತ್ತು. ಪ್ರಕರಣವನ್ನು ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿತ್ತು. ಪ್ರಕರಣ ಸಂಬಂಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಅಜಂಖಾನ್ ಅವರು, ಇದೊಂದು ಸರ್ಕಾರದ ವಿರುದ್ಧದ ರಾಜಕೀಯ ಪಿತೂರಿಯಾಗಿದೆ ಎಂದು ಹೇಳಿದ್ದರು. ಅಜಂಖಾನ್ ಅವರ ಈ ಹೇಳಿಕೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು.

ಈ ಹಿನ್ನಲೆಯಲ್ಲಿ ಹೇಳಿಕೆ ಸಂಬಂಧ ಅಜಂಖಾನ್ ಅವರು ಕ್ಷಮೆಯಾಚಿಸಿದ್ದರು. ಕ್ಷಮಾಪಣೆಯ ಪತ್ರದ ಪ್ರತಿಯೊಂದನ್ನು ನ್ಯಾಯಾಲಕ್ಕೆ ಸಲ್ಲಿಕೆ ಮಾಡಿದ್ದರು. ನವೆಂಬರ್ 18 ರಂದು ಕ್ಷಮಾಪಣಾ ಪತ್ರವನ್ನು ನಾಯಾಲಯಕ್ಕೆ ಸಲ್ಲಿಕೆ ಮಾಡಿದ್ದ ಅಜಂಖಾನ್ ಅವರು, ಹೇಳಿಕೆ ಸಂಬಂಧ ಬೇಷರತ್ ಕ್ಷಮೆಯಾಚಿಸಲು ನಾನು ಸಿದ್ಧನಿದ್ದೇನೆಂದು ಹೇಳಿದ್ದರು.

ಪ್ರಕರಣ ಸಂಬಂಧ ಇಂದು ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿ ಅಮಿತ್ವಾ ರಾಯ್ ಅವರಿದ್ದ ಪೀಠ, ಅಜಂಖಾನ್ ಅವರ ಬೇಷರತ್ ಕ್ಷಮಾಪಣೆಯನ್ನು ತಿರಸ್ಕರಿಸಿದೆ. ಅಲ್ಲದೆ, ಖಾನ್ ಅವರು ಈ ಹಿಂದೆ ಸಲ್ಲಿಸಿದ್ದ ಅಫಿಡವಿಟ್ ನಲ್ಲಿ ಸಾಕಷ್ಟು ತಪ್ಪುಗಳಿದ್ದು, ಡಿಸೆಂಬರ್ 15ರೊಳಗಾಗಿ ಹೊಸದಾಗಿ ಮತ್ತೊಂದು ಅಫಿಡವಿಟ್ ನ್ನು ಸಲ್ಲಿಸುವಂತೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

SCROLL FOR NEXT