ರಕ್ಷಣಾ ಸಚಿವ ಮನೋಹರ್ ಪರಿಕ್ಕರ್
ನವದೆಹಲಿ: ಪಶ್ಚಿಮ ಬಂಗಾಳದ ಟೋಲ್ ಪ್ಲಾಜಾಗಳಲ್ಲಿ ಸೇನೆಯನ್ನು ನಿಯೋಜಿಸಿದ್ದ ಕೇಂದ್ರ ಸರ್ಕಾರದ ಕ್ರಮಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಮಾಡಿರುವ ಆರೋಪಗಳಿಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಪತ್ರದ ಮೂಲಕ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ನಿಮ್ಮಂಥ ಉನ್ನತ ಸ್ಥಾನದಲ್ಲಿರುವ ಅನುಭವಿ ವ್ಯಕ್ತಿಯಿಂದ ಈ ಆರೋಪವನ್ನು ನಿರೀಕ್ಷಿಸಿರಲಿಲ್ಲ. ನಿಮ್ಮ ಆರೋಪಗಳಿಂದ ತುಂಬಾ ನೋವಾಗಿದೆ ಎಂದು ಹೇಳಿದ್ದಾರೆ.
ವಾಡಿಕೆಯ ಎಣಿಕೆಯ ಕಾರ್ಯಚರಣೆಯಾಗಿ ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳಲ್ಲಿ ಸೇನೆಯನ್ನು ನಿಯೋಜಿಸಲಾಗಿತ್ತು ಎಂದು ಕೇಂದ್ರ ಸರ್ಕಾರ ವಿವರಿಸಿತ್ತು. ಆದರೆ ತಮ್ಮ ಸರ್ಕಾರದ ಸಲಹೆ ಕೇಳದೆ ತಾವು ನೋಟು ನಿಷೇಧಕ್ಕೆ ಪ್ರತಿಭಟನೆ ನಡೆಸುತ್ತಿರುವುದರಿಂದಾಗಿ ತಮ್ಮ ವಿರುದ್ಧ ಸೇಡು ತೀರಿಸಿಕೊಳ್ಳಲು ಕೇಂದ್ರ ಸರ್ಕಾರ ಹೀಗೆ ಮಾಡಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದರು.
ನಿಮ್ಮ ಆರೋಪದಿಂದ ದೇಶದ ಸೇನಾಪಡೆಯ ನೈತಿಕತೆಗೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಸಾರ್ವಜನಿಕ ಜೀವನದಲ್ಲಿ ನಿಮ್ಮಂಥ ಅನುಭವಿ ರಾಜಕಾರಣಿ, ಗೌರವಾನ್ವಿತ ಸ್ಥಾನದಲ್ಲಿರುವ ನಿಮ್ಮಂತವರಿಂದ ಈ ಮಾತುಗಳು ಬರುತ್ತವೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಪರಿಕ್ಕರ್ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ.
ನೀವು ರಾಜ್ಯ ಸರ್ಕಾರದ ಸಂಬಂಧಪಟ್ಟ ಸಂಸ್ಥೆಗಳೊಂದಿಗೆ ವಿಚಾರಿಸುತ್ತಿದ್ದರೆ ಸೇನಾಪಡೆ ಮತ್ತು ನಿಮ್ಮ ರಾಜ್ಯ ಪೊಲೀಸ್ ಪಡೆ ನಡೆಸಿದ ಪತ್ರ ವ್ಯವಹಾರಗಳು ಮತ್ತು ಜಂಟಿಯಾಗಿ ನಡೆಸಿದ ಸ್ಥಳಗಳ ತಪಾಸಣೆ ಕುರಿತು ಗೊತ್ತಾಗುತ್ತಿತ್ತು ಎಂದು ಹೇಳಿದ್ದಾರೆ.
ಡಿಸೆಂಬರ್ 1ರಂದು ಮುಖ್ಯಮಂತ್ರಿಯವರ ಕೇಂದ್ರ ಕಚೇರಿ ಕೋಲ್ಕತ್ತಾದ ನಬನ್ನದ ಬಳಿ ಇರುವ ಟೋಲ್ ಪ್ಲಾಜಾ ಹತ್ತಿರ ಸೇನಾ ಪಡೆ ನಿಯೋಜಿಸಿದ್ದು ಮಮತಾ ಬ್ಯಾನರ್ಜಿಯವರನ್ನು ಕೆರಳಿಸಿತ್ತು. ಅವರು ತಮ್ಮ ಕಚೇರಿಯಿಂದ ಹೊರಹೋಗಲು ನಿರಾಕರಿಸಿದ್ದರು.
ಸೇನಾಪಡೆಯನ್ನು ಮೊದಲು ಕಳುಹಿಸುವಂತೆ ಒತ್ತಾಯಿಸಿದ್ದರು. ಕೇಂದ್ರ ಸರ್ಕಾರ ತಮ್ಮ ಸರ್ಕಾರವನ್ನು ಹೆದರಿಸಲು ಪ್ರಯತ್ನಿಸುತ್ತಿದೆ. ನಾನಿಲ್ಲಿ ಸಚಿವಾಲಯದಲ್ಲಿ ಕಾದು ಕುಳಿತು ಗಮನಿಸುತ್ತಿದ್ದೇನೆ, ಪ್ರಜಾಪ್ರಭುತ್ವವನ್ನು ರಕ್ಷಿಸುತ್ತಿದ್ದೇನೆ ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದರು.
ಪರಿಕ್ಕರ್ ಅವರು ತಮ್ಮ ಪತ್ರದಲ್ಲಿ, ಬ್ಯಾನರ್ಜಿಯವರು ರಾಜಕೀಯ ಗೊಂದಲಗಳಿಂದ ಹೀಗೆ ವರ್ತಿಸಿದರು. ರಾಜಕೀಯ ಪಕ್ಷಗಳು ಮತ್ತು ರಾಜಕೀಯ ವ್ಯಕ್ತಿಗಳು ಒಬ್ಬರಿಗೊಬ್ಬರು ಆರೋಪ, ಪ್ರತ್ಯಾರೋಪ ಮಾಡುವುದು ಸಹಜ. ಆದರೆ ಸೇನಾ ಪಡೆಯ ಬಗ್ಗೆ ಮಾತನಾಡುವಾಗ ತುಂಬಾ ಜಾಗ್ರತರಾಗಿರಬೇಕು ಎಂದು ಹೇಳಿದ್ದಾರೆ.
ಆದರೆ ಸೇನೆ ಕೂಡ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಆರೋಪವನ್ನು ತಳ್ಳಿಹಾಕಿತ್ತು. ಅಂಕಿಅಂಶದ ದಾಖಲೆಗಳನ್ನು ಸಂಗ್ರಹಿಸುವುದಕ್ಕಾಗಿ ಮಾತ್ರ ಸೇನಾಪಡೆಯನ್ನು ನಿಯೋಜಿಸಲಾಗಿದೆ ಹೊರತು ಬೇರಾವ ಉದ್ದೇಶವಿಲ್ಲ ಎಂದು ಸ್ಪಷ್ಟನೆ ನೀಡಿತ್ತು. ಅಲ್ಲದೆ ಬೂತ್ ಗಳಲ್ಲಿ ಸೇನಾ ಸಿಬ್ಬಂದಿ ಹಣ ಸಂಗ್ರಹಿಸಿದ್ದಾರೆ ಎಂಬ ಆರೋಪವನ್ನು ಭಾರತೀಯ ಸೇನೆ ತಳ್ಳಿ ಹಾಕಿತ್ತು.
ಪರಿಕ್ಕರ್ ಅವರು ಬರೆದ ಪತ್ರದ ಬಗ್ಗೆ ಪ್ರತಿಕ್ರಿಯಿಸಿರುವ ತೃಣಮೂಲ ಶಾಸಕ ಡೆರೆಕ್ ಒ ಬ್ರಿಯನ್, ರಕ್ಷಣಾ ಸಚಿವರ ಪತ್ರ ಮುಖ್ಯಮಂತ್ರಿಯವರಿಗೆ ತಲುಪುವ ಮುನ್ನ ಮಾಧ್ಯಮಗಳಿಗೆ ಸೋರಿಕೆಯಾಗಿದೆ. ಇದಕ್ಕೆ ಮಮತಾ ಬ್ಯಾನರ್ಜಿಯವರು ಕಟುವಾದ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics