ಶಿಲ್ಲಾಂಗ್: ಈಶಾನ್ಯ ರಾಜ್ಯಗಳಲ್ಲಿ ಡಿ.12 ರಂದು ಭೂಕಂಪ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪದ ತೀವ್ರತೆ ಕಡಿಮೆ ಇರುವುದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿರುವ ಬಗ್ಗೆ ಈ ವರೆಗೂ ವರದಿಯಾಗಿಲ್ಲ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ. ಬೆಳಿಗ್ಗೆ 7.27 ರ ವೇಳೆಗೆ ಭೂಕಂಪ ಸಂಭವಿಸಿದ್ದು, ಮೇಘಾಲಯದ ವೆಸ್ಟ್ ಖಾಸಿ ಹಿಲ್ ನಲ್ಲಿ ಭೂಕಂಪದ ಕೇಂದ್ರ ದಾಖಲಾಗಿದೆ ಎಂದು ಪ್ರಾದೇಶಿಕ ಭೂಕಂಪಶಾಸ್ತ್ರೀಯ ಪ್ರಯೋಗಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಸ್ಸಾಂ, ಮೇಘಾಲಯ, ಮಿಜೋರಾಂ, ತ್ರಿಪುರಾ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಣಿಪುರ ರಾಜ್ಯಗಳನ್ನು ವಿಶ್ವದ ಅತಿ ಹೆಚ್ಚು ಭೂಕಂಪನ ಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಗುರುತಿಸಲಾಗಿದೆ.