ನವದೆಹಲಿ: 500 ಮತ್ತು 1000 ರು.ಮುಖಬೆಲೆಯ ನೋಟುಗಳನ್ನು ನಿಷೇಧಗೊಳಿಸಿದ ಬಳಿಕ ಈ ವರೆಗೂ ಶೇ.80ರಷ್ಟು ಅಂದರೆ ಸುಮಾರು 12.44 ಲಕ್ಷ ಕೋಟಿ ಅಥವಾ 184 ಬಿಲಿಯನ್ ಮೌಲ್ಯದ ನೋಟುಗಳು ಬ್ಯಾಂಕುಗಳಿಗೆ ವಾಪಸ್ ಆಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ಕಳೆದ ನವೆಂಬರ್ 8ರಂದು ನೋಟು ನಿಷೇಧವಾಗಿದ್ದು, ಅಂದಿನಿಂದ ಇಂದಿನವರೆಗೂ ಅಂದರೆ ಸುಮಾರು 35 ದಿನಗಳ ಅಂತರದಲ್ಲಿ ಶೇ.80ರಷ್ಟು ಹಳೆಯ ನೋಟುಗಳು ಬ್ಯಾಂಕುಗಳಿಗೆ ಜಮೆಯಾಗಿದೆ ಎಂದು ಆರ್ ಬಿಐ ಹೇಳಿದೆ. ಆರ್ ಬಿಐ ಮೂಲಗಳ ಪ್ರಕಾರ ದೇಶಾದ್ಯಂತ ಸುಮಾರು 15.44 ಲಕ್ಷ ಕೋಟಿ 500 ಮತ್ತು 1000 ರು.ಮುಖಬೆಲೆಯ ನೋಟುಗಳು ಚಲಾವಣೆಯಾಗಿತ್ತು. ಈ ಪೈಕಿ ನೋಟು ನಿಷೇಧದ ಬಳಿಕ ಒಟ್ಟು 12.44 ಲಕ್ಷ ಕೋಟಿ ಹಣ ಬ್ಯಾಂಕುಗಳಿಗೆ ವಾಪಸಾಗಿದೆ ಎಂದು ತಿಳಿದುಬಂದಿದೆ.
ಆರ್ ಬಿಐ ಅಭಿಪ್ರಾಯಪಟ್ಟಿರುವಂತೆ ನೋಟು ನಿಷೇಧ ಬಳಿಕ ಕೇಂದ್ರ ಸರ್ಕಾರ ನೀಡಿರುವ ಗಡುವಿನೊಳಗೆ ಸುಮಾರು 13 ಲಕ್ಷ ಕೋಟಿ ಹಳೆಯ ನೋಟುಗಳು ಬ್ಯಾಂಕಿಗೆ ಬರಲಿದ್ದು, ಉಳಿದ 2.44 ಲಕ್ಷ ಕೋಟಿ ಹಣ ಚಲಾವಣೆ ರಹಿತವಾಗಿ ವ್ಯರ್ಥವಾಗಲಿದೆ. ನೋಟು ನಿಷೇಧ ಬಳಿಕ ಆರ್ ಬಿಐ 500 ಮತ್ತು 2000 ಮುಖಬೆಲೆಯ ಒಟ್ಟು 1.7 ಬಿಲಿಯನ್ ನೋಟುಗಳನ್ನು ಮುದ್ರಣ ಮಾಡಿದ್ದು, ಅಂತೆಯೇ 10, 20, 50 ಮತ್ತು 100ರು.ಮುಖಬೆಲೆಯ ಒಟ್ಟು 20.1ಬಿಲಿಯನ್ ನೋಟುಗಳನ್ನು ಮುದ್ರಣ ಮಾಡಲಾಗಿದೆ. ಅಂತೆಯೇ ಹೊಸ 500 ಮತ್ತು 2000 ಮುಖಬೆಲೆಯ ಸುಮಾರು 24 ಬಿಲಿಯನ್ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತಂದಿರುವುದಾಗಿ ಹೇಳಿದೆ.
ಈ ಪೈಕಿ ಬಹುತೇಕ ಹಣ ಚಲಾವಣೆಯಾಗುತ್ತಿದ್ದು, ಪ್ರಸ್ತುತ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಮತ್ತಷ್ಟು ನೋಟುಗಳನ್ನು ಚಲಾವಣೆಗೆ ತರುವುದಾಗಿ ಆರ್ ಬಿಐ ಹೇಳಿದೆ.