ನವದೆಹಲಿ: ಕೇಂದ್ರ ಸರ್ಕಾರ ತನ್ನ ಅಧಿಕಾರಿ ಕಿತ್ತುಕೊಳ್ಳುತ್ತಿದೆ ಎಂಬ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಾದವನ್ನು ತಕ್ಕಮಟ್ಟಿಗೆ ಬೆಂಬಲಿಸಿರುವ ಸುಪ್ರೀಂ ಕೋರ್ಟ್, ಚುನಾಯಿತ ಸರ್ಕಾರಕ್ಕೆ ಸ್ವಲ್ಪ ಅಧಿಕಾರ ಇರಬೇಕು. ಇಲ್ಲದಿದ್ದರೆ ಸರ್ಕಾರ ನಡೆಸಲು ಸಾಧ್ಯವಿಲ್ಲ ಎಂದು ಬುಧವಾರ ಅಭಿಪ್ರಾಯಪಟ್ಟಿದೆ.
ಅಧಿಕಾರಿಗಳ ನೇಮಕ, ವರ್ಗಾವಣೆ ಸೇರಿದಂತೆ ಹಲವು ಸರ್ಕಾರದ ನಿರ್ಧಾರಗಳಲ್ಲಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅರವಿಂದ್ ಕೇಜ್ರಿವಾಲ್ ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದು, ವಿಚಾರಣೆ ನಡೆಸಿದ ಕೋರ್ಟ್, ಚುನಾಯಿತ ಸರ್ಕಾರಗಳಿಗೆ ಅಧಿಕಾರವಿರಬೇಕು ಎಂದು ಹೇಳಿ ವಿಚಾರಣೆಯನ್ನು ಜನವರಿ 18ಕ್ಕೆ ಮುಂದೂಡಿದೆ.
ಕೇಜ್ರಿವಾಲ್ ವಾದವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಕೇಂದ್ರ ಸರ್ಕಾರ, ದೆಹಲಿ ಸ್ವತಂತ್ರ ರಾಜ್ಯವಲ್ಲ. ಅದೊಂದು ಕೇಂದ್ರಾಡಳಿತ ಪ್ರದೇಶ. ಹೀಗಾಗಿ ಲೆಫ್ಟಿನೆಂಟ್ ಗವರ್ನರ್ ಅವರಿಗೆ ವಿಶೇಷ ಅಧಿಕಾರ ಇದೆ ಎಂದು ವಾದಿಸಿದೆ. ಕಳೆದ ಆಗಸ್ಟ್ ನಲ್ಲಿ ಇದನ್ನು ದೆಹಲಿ ಹೈಕೋರ್ಟ್ ಸಹ ಒಪ್ಪಿಕೊಂಡಿದೆ. ಅಲ್ಲದೆ ನಜೀಬ್ ಜಂಗ್ ಅವರೇ ಸರ್ಕಾರ ಮುಖ್ಯಸ್ಥ ಎಂದು ಸ್ಪಷ್ಟಪಡಿಸಿದೆ.
ಅರವಿಂದ್ ಕೇಜ್ರಿವಾಲ್ ಅವರು ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದು, ಜನವರಿಯಲ್ಲಿ ವಿಚಾರಣೆಗೆ ಬರಲಿದೆ.