ಹೈದರಾಬಾದ್: ದುಬಾರಿ ನೋಟಿನ ಮೇಲಿನ ನಿಷೇಧ ಕುರಿತಂತೆ ಒಂದೆಡೆ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದರೆ, ಮತ್ತೊಂದೆಡೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ. ರಾವ್ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.
ತೆಲಂಗಾಣ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿಯವರ ನೋಟು ನಿಷೇಧ ನಿರ್ಧಾರವನ್ನು ಹೊಗಳಿದ್ದಾರೆ. ನೋಟು ನಿಷೇಧ ನಿರ್ಧಾರ ಕಪ್ಪುಹಣ, ಭಯೋತ್ದಾದನೆ ಹಾಗೂ ನಕಲಿ ನೋಟಿನ ನಿಯಂತ್ರಣಕ್ಕೆ ತರಲಿದ್ದು, ದೇಶದ ಅಭಿವೃದ್ಧಿಗೆ ಇಂದು ಸಹಾಯಕವಾಗಲಿದೆ ಎಂದು ಹೇಳಿದ್ದಾರೆ.
ರು.500 ಹಾಗೂ 1,000 ನೋಟಿನ ಮೇಲೆ ನಿಷೇಧ ಹೇರಿದ ದಿನದಿಂದಲೂ ವಿರೋಧ ಪಕ್ಷಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಪ್ರತಿಭಟನೆ ನಡೆಸುತ್ತಲೇ ಇದ್ದು, ವಿರೋಧ ಪಕ್ಷಗಳ ಪ್ರತಿಭಟನೆ ಹಾಗೂ ಗದ್ದಲದಿಂದಾಗಿ ಸಂಸತ್ತು ಕಲಾಪ ಸಂಪೂರ್ಣವಾಗಿ ಬಲಿಯಾಗಿದೆ. ಇದರ ಬೆನ್ನಲ್ಲೇ ಕೆ.ಸಿ. ರಾವ್ ಅವರು ಮೋದಿಯವರ ನಿರ್ಧಾರಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ದುಬಾರಿ ನೋಟಿನ ಮೇಲೆ ನಿಷೇಧ ಹೇರಿದ ಬಳಿಕ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬೆಂಬಲ ವ್ಯಕ್ತಪಡಿಸಿದ್ದರು. ಇದರಂತೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರೂ ಕೂಡ ಬೆಂಬಲ ವ್ಯಕ್ತಪಡಿಸಿದ್ದರು.