ದೇಶ

ನೋಟು ನಿಷೇಧ ಶಿಫಾರಸನ್ನು ಇಂದಿರಾ ಗಾಂಧಿ ತಿರಸ್ಕರಿಸಿದ್ದರು: ಪ್ರಧಾನಿ ಮೋದಿ

Manjula VN

ನವದೆಹಲಿ: ನಿರಂಜನ್ ನಾಥ್ ವಾಂಚೂ ಸಮಿತಿಯ ನೋಟು ನಿಷೇಧ ಶಿಫಾರಸನ್ನು ಅಂದಿನ ಪ್ರಧಾನಮಂತ್ರಿಯಾಗಿದ್ದ ದಿವಂಗತ ಇಂದಿರಾಗಾಂಧಿ ಅವರು ತಿರಸ್ಕರಿಸಿದ್ದರು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ.

ಬಿಜೆಪಿ ಸಂಸದೀಯ ಸಭೆಯಲ್ಲಿ ಮಾತನಾಡಿರುವ ಪ್ರಧಾನಿ ಮೋದಿಯವರು ಈ ಬಗ್ಗೆ ಮಾತನಾಡಿದ್ದು, ದುಬಾರಿ ನೋಟುಗಳ ಮೇಲೆ ನಿಷೇಧ ಹೇರುವಂತೆ ನಿರಂಜನ್ ನಾಥ್ ವಾಂಚೂ ನೇತೃತ್ವದ ಸಮಿತಿ ಶಿಫಾರಸ್ಸು ಮಾಡಿತ್ತು. ಆದರೆ, ಸಮಿತಿಯ ಈ ಶಿಫಾರಸ್ಸನ್ನು ಇಂದಿರಾ ಗಾಂಧಿಯವರು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿದ್ದ ಅಂದಿನ ಉಪ ಪ್ರಧಾನಮಂತ್ರಿ ವೈ.ಬಿ, ಚೌಹಾಣ್ ಅವರಿಗೆ ಮುಂದಿನ ಚುನಾವಣೆಯಲ್ಲಿ ನಿಲ್ಲಲು ನಿಮಗೆ ಇಷ್ಟವಿಲ್ಲವೇ ಎಂದು ಇಂದಿರಾ ಗಾಂಧಿಯವರು ಕೇಳಿದ್ದರೆಂದು ಹೇಳಿದ್ದಾರೆ.

ಸಂಸತ್ತು ಕಲಾದಲ್ಲಿ ತೀವ್ರ ಗದ್ದಲ ಉಂಟಾಗುತ್ತಿರುವ ಹಿನ್ನಲೆಯಲ್ಲಿ ನಿನ್ನೆಯಷ್ಟೇ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿಯವರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಸಂಸತ್ತಿಗೆ ರಾಜೀನಾಮೆ ನೀಡಬೇಕೆಂದು ಅನಿಸುತ್ತಿದೆ ಎಂದು ಹೇಳಿದ್ದರು.

ಸರ್ಕಾರದ ವಿರುದ್ಧವೇ ಅಡ್ವಾಣಿಯವರು ತೀವ್ರ ಅಸಮಾಧಾನವನ್ನು ಹೊರಹಾಕಿರುವ ಹಿನ್ನಲೆಯಲ್ಲಿ ಜನತೆಯ ಗಮನವನ್ನು ಬೇರೆಡೆ ಸೆಳೆಯಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೆಂಬ ಮಾತುಗಳು ಕೇಳಿ ಬರತೊಡಗಿವೆ.

ಸಂಸತ್ತು ಕಲಾಪ ಗದ್ದಲದಿಂದಲೇ ಸಂಪೂರ್ಣವಾಗಿ ಬಲಿಯಾಗಿರುವ ಹಿನ್ನೆಲೆಯಲ್ಲಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿಯವರು ಬೇಸರ ವ್ಯಕ್ತಪಡಿಸಿದ್ದು, ಅಸಮ್ಮತಿ, ಅಡ್ಡಿ ಹಾಗೂ ಪ್ರತಿಭಟನೆ ನಡುವಿನ ವ್ಯತ್ಯಾಸ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವಂತೆ ರಾಜ್ಯಸಭೆಯ ಎಲ್ಲಾ ನಾಯಕರಿಗೆ ತಿಳಿಸಿದ್ದಾರೆ.

SCROLL FOR NEXT