ದೇಶ

ಭಾರತೀಯ ಸೇನೆಗೆ ಮುಖ್ಯಸ್ಥರಾಗಿ ಲೆ.ಜನರಲ್ ಬಿಪಿನ್ ರಾವತ್ ನೇಮಕ

Manjula VN

ನವದೆಹಲಿ: ಭೂ ಸೇನೆ ಸೇರಿದಂತೆ 4 ಪ್ರಮುಖ ಹುದ್ದೆಗಳಿಗೆ ಕೇಂದ್ರ ಸರ್ಕಾರ ಮುಖ್ಯಸ್ಥರನ್ನು ನೇಮಕ ಮಾಡಿದ್ದು, ಭಾರತೀಯ ಸೇನಾ ನೂತನ ಮುಖ್ಯಸ್ಥರಾಗಿ ಲೆಫ್ಪಿನೆಂಟ್ ಜನರಲ್ ಬಿಪಿನ್ ರಾವತ್ ಅವರು ನೇಮಕಗೊಂಡಿದ್ದಾರೆ.

ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ಅವರನ್ನು ಸೇನಾ ಪಡೆಯ ನೂತನ ಮುಖ್ಯಸ್ಥರನ್ನಾಗಿ ಹಾಗೂ ಏನ್ ಚೀಫ್ ಮಾರ್ಷಲ್ ಬಿ.ಎಸ್. ಧನೋವಾ ಅವರನ್ನು ವಾಯುಪಡೆಯ ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ.

ಭೂಸೇನೆ, ವಾಯುಸೇನೆ, ಗುಪ್ತಚರದಳ ಹಾಗೂ ರಾ ಮುಖ್ಯಸ್ಥರ ಹುದ್ದೆಗಳು ದೇಶದ ಅತ್ಯಂತ ಸೂಕ್ಷ್ಮ ಹುದ್ದೆಗಳಾಗಿದ್ದು, ಆಯಾ ಕ್ಷೇತ್ರಗಳಲ್ಲಿ ಹೆಚ್ಚಿನ ಅನುಭವ ಹೊಂದಿರುವ ದಕ್ಷ ಅಧಿಕಾರಿಗಳನ್ನು ಕೇಂದ್ರದ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ನೇಮಕ ಮಾಡಿದೆ. ಇದರಂತೆ ಭೂಸೇನೆಯ ಮುಖ್ಯಸ್ಥರಾಗಿ ಲೆ.ಜನರಲ್ ಬಿಪಿನ್ ರಾವತ್, ವಾಯುಸೇನಾಧಿಕಾರಿಯಾಗಿ ಏರ್ ಚೀಫ್ ಮಾರ್ಷಲ್ ಬಿ.ಎನ್ ಧನೋವಾ ಅವರನ್ನು ನೇಮಕ ಮಾಡಲಾಗಿದೆ.

ಇನ್ನು ದೇಶದ ಬೇಹುಗಾರಿಕಾ ದಳದ ಮುಖ್ಯಸ್ಥರಾಗಿ ರಾಜೀವ್ ಜೈನ್ ಅವರು ನೇಮಕಗೊಂಡಿದ್ದರೆ, ಸಂಶೋಧನಾ ಹಾಗೂ ವಿಶ್ಲೇಷನಾ ತಂಡ (ರಾ)ದ ಮುಖ್ಯಸ್ಥರಾಗಿ ಅನಿಲ್ ಧಾಸ್ಮಾನ ಅವರನ್ನು ಆಯ್ಕೆ ಮಾಡಲಾಗಿದೆ. ಜೈನ್ ಹಾಗೂ ಧಾಸ್ಮಾನ ಅವರು 2 ವರ್ಷಗಳ ಅವಧಿಗೆ ಕಾರ್ಯನಿರ್ವಹಿಸಿದ್ದಾರೆಂದು ತಿಳಿದುಬಂದಿದೆ.

ಪ್ರಸಕ್ತ ವರ್ಷದಲ್ಲಿಯೇ ರಾವತ್ ಅವರು ಸೇನೆಯ ಉಪಮುಖ್ಯಸ್ಥರಾಗಿ ನೇಮಕವಾಗಿದ್ದರು. ರಾವತ್ ಅವರು ಸೇನೆಯ ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ. ಇನ್ನು ಧನೋವಾ ಅವರೂ ಕೂಡ ವಾಯುಸೇನೆಯ ಉಪಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಾರ್ಗಿಲ್ ಯುದ್ಧ ಸೇರಿದಂತೆ ಬಹುತೇಕ ಕಾರ್ಯಚರಣೆಯನ್ನು ಮುನ್ನಡೆಸಿರುವ ಅನುಭವ ಧನೋವಾ ಅವರಿಗಿದ್ದು, ವಾಯುಸೇನೆಯ ವಿವಿಧ ಹಂತದಲ್ಲಿ ಕಾರ್ಯನಿರ್ವಹಿಸುದ ಅನುಭವ ಧನೋವಾ ಅವರಿಗಿದೆ.

ಡಿಸೆಂಬರ್ 31 ರಂದು ದಲ್ಬೀರ್ ಸಿಂಗ್ ಸುಹಾಗ್ ಅವರು ಸೇನಾ ಮುಖ್ಯಸ್ಥ ಸ್ಥಾನದಿಂದ ನಿವೃತ್ತಿಗೊಳ್ಳುತ್ತಿರುವ ಹಿನ್ನಲೆಯಲ್ಲಿ ರಾವತ್ ಅವರನ್ನು ನೂತನ ಸೇನಾ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.

SCROLL FOR NEXT