ವಿಜಯವಾಡ: 500, 1000 ರೂ ನೋಟು ನಿಷೇಧ ಮಾಡುವಂತೆ ಪದೇ ಪದೇ ಪ್ರಧಾನಿಗೆ ಪತ್ರ ಬರೆದಿದ್ದ ಬಿಜೆಪಿ ಮಿತ್ರ ಪಕ್ಷ ತೆಲುಗು ದೇಶಂ ಪಕ್ಷದ ನಾಯಕ, ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಈಗ ನೋಟು ನಿಷೇಧದ ವಿಚಾರವಾಗಿ ಪ್ರತಿದಿನವೂ ತಲೆ ಚಚ್ಕೋತಾ ಇದ್ದಾರಂತೆ!. ಹೀಗಂತಾ ಸ್ವತಃ ಚಂದ್ರಬಾಬು ನಾಯ್ಡು ಅವರೇ ಪಕ್ಷದ ಶಾಸಕರು, ಸಂಸದರ ಸಮ್ಮುಖದಲ್ಲಿ ಹೇಳಿದ್ದಾರೆ.
ನೋಟು ನಿಷೇಧದ ನಂತರ ಉಂಟಾದ ನಗದು ಬಿಕ್ಕಟ್ಟು ಹಾಗೂ ಇನ್ನಿತರ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಸಲಹೆ ನೀಡಲು ಕೇಂದ್ರ ಸರ್ಕಾರ ರಚಿಸಿರುವ ಮುಖ್ಯಮಂತ್ರಿಗಳ ಸಮಿತಿಗೆ ಇತ್ತೀಚೆಗಷ್ಟೇ ಚಂದ್ರಬಾಬು ನಾಯ್ಡು ಅವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು. ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿ 40 ದಿನಗಳಾದರೂ ನಗದು ಬಿಕ್ಕಟ್ಟು ಪರಿಹಾರವಾಗದೇ ಉಳಿದಿದೆ. ಈ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಂದ್ರಬಾಬು ನಾಯ್ಡು, ನೋಟು ನಿಷೇಧದ ನಂತರ ನಗದು ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಪ್ರತಿ ದಿನ ಎರಡು ಗಂಟೆ ಕೆಲಸ ಮಾಡುತ್ತಿದ್ದೇನೆ, ಆದರೆ ತಲೆ ಚಚ್ಚಿಕೊಂಡರೂ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪಕ್ಷದ ಸಂಸದ, ಶಾಸಕರ ಸಮ್ಮುಖದಲ್ಲಿ ಅಸಹಾಯಕತೆ ತೋಡಿಕೊಂಡಿದ್ದಾರೆ.
ನೋಟು ನಿಷೇಧ ನಮ್ಮ ಬಯಕೆಯಾಗಿರಲಿಲ್ಲ. ಆದರೆ ಆಗಿ ಹೋಗಿದೆ. ಎಟಿಎಂ ಗಳಲ್ಲಿ ನಗದು ಬಿಕ್ಕಟ್ಟು ಉಂಟಾಗಿದ್ದು, ದೈನಂದಿನ ಅಗತ್ಯತೆಗಳಿಗೂ ಹಣ ಇಲ್ಲದಂತಾಗಿದೆ. ನೋಟು ನಿಷೇಧದಿಂದ ಉಂಟಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರತಿದಿನವೂ ಎರಡು ಗಂಟೆ ಕೆಲಸ ಮಾಡುತ್ತಿದ್ದೇನೆ ಆದರೆ ಹಲವು ಸಮಸ್ಯೆಗಳಿಗೆ ಇನ್ನೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ ಎಂದಿದ್ದಾರೆ.
ನ.8 ರಂದು ಪ್ರಧಾನಿ ನರೇಂದ್ರ ಮೋದಿ 500, 1000 ರೂ ನೋಟು ನಿಷೇಧದ ನಿರ್ಧಾರವನ್ನು ಘೋಷಿಸಿದಾಗ ಚಂದ್ರಬಾಬು ನಾಯ್ಡು ಅದನ್ನು ಸ್ವಾಗತಿಸಿದ್ದಲ್ಲದೇ, ತಾವು ನೋಟು ನಿಷೇಧಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದನ್ನು ಉಲ್ಲೇಖಿಸಿದ್ದರು.
ನೋಟು ನಿಷೇಧದಿಂದ ಉಂಟಾಗಿರುವ ಬಿಕ್ಕಟ್ಟನ್ನು 1984 ರ ಆಗಸ್ಟ್ ನಲ್ಲಿ ಎನ್ ಟಿ ಆರ್ ವಿರುದ್ಧ ಪಕ್ಷದಲ್ಲಿ ಉಂಟಾಗಿದ್ದ ದಂಗೆಗೆ ಹೋಲಿಕೆ ಮಾಡಿರುವ ಚಂದ್ರಬಾಬು ನಾಯ್ಡು, ಆ ಬಿಕ್ಕಟ್ಟು ಸಹ ಕೇವಲ 30 ದಿನಗಳಲ್ಲಿ ಮುಗಿದುಹೋಗಿತ್ತು. ಆದರೆ ನೋಟು ನಿಷೇಧದಿಂದ ಉಂಟಾಗಿರುವ ಬಿಕ್ಕಟ್ಟು 40 ದಿನಗಳಾದರೂ ಮುಂದುವರೆದಿದೆ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರದಿಂದ ಜನಸಾಮಾನ್ಯರಿಗೆ ಸಮಸ್ಯೆ ಉಂಟಾಗಲಿದ್ದು, ಹಾನಿಕಾರಕ ರಾಜಕೀಯ ಪರಿಣಾಮಗಳನ್ನು ಸೃಷ್ಟಿಸುತ್ತದೆ ಎಂದು ಹಲವು ಟಿಡಿಪಿ ನಾಯಕರು ಈ ಹಿಂದೆ ಅಭಿಪ್ರಾಯಪಟ್ಟಿದ್ದರು.