ಮಮತಾ ಬ್ಯಾನರ್ಜಿ, ಎಂ.ಕೆ.ಸ್ಟಾಲಿನ್
ಚೆನ್ನೈ: ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ ರಾಮ ಮೋಹನ್ ರಾವ್ ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ನಡೆಸಿದ ದಾಳಿ ಬಗ್ಗೆ ಬೇಸರ ವ್ಯಕ್ತಪಡಿಸಿದ ಡಿಎಂಕೆ ಖಜಾಂಚಿ ಎಂ.ಕೆ.ಸ್ಟಾಲಿನ್, ಇದು ರಾಜ್ಯಕ್ಕೆ ನಾಚಿಕೆಗೇಡು ಎಂದು ಹೇಳಿದ್ದಾರೆ.
ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ ಅವರು, ತಮಿಳುನಾಡಿನಲ್ಲಿ ಮುಖ್ಯ ಕಾರ್ಯದರ್ಶಿಯೊಬ್ಬರ ನಿವಾಸದ ಮೇಲೆ ದಾಳಿ ನಡೆದಿದ್ದು ಇದು ಬಹುಶಃ ಮೊದಲ ಸಲವಿರಬೇಕು. ಇದು ರಾಜ್ಯಕ್ಕೆ ನಾಚಿಕೆಗೇಡಿನ ವಿಷಯ ಎಂದು ಹೇಳಿದ್ದಾರೆ.
ಐಟಿ ಇಲಾಖೆ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಚೆನ್ನೈನ ಅಣ್ಣಾನಗರದಲ್ಲಿ ಮುಖ್ಯ ಕಾರ್ಯದರ್ಶಿಯವರ ನಿವಾಸದ ಮೇಲೆ ದಾಳಿ ನಡೆಸಿದ್ದರು.
ಕಳೆದ ಜೂನ್ ತಿಂಗಳಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡ ರಾವ್ ಜಾಗೃತ ಆಯೋಗ ಮತ್ತು ಆಡಳಿತ ಸುಧಾರಣೆಗಳ ಆಯೋಗದ ಹೆಚ್ಚುವರಿ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ.
500, 1000ದ ನೋಟುಗಳ ಅಮಾನ್ಯತೆ ನಂತರ ದೇಶಾದ್ಯಂತ ನಕಲಿ ನೋಟುಗಳ ವಿರುದ್ಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ.
ಕೇಂದ್ರೀಯ ತನಿಖಾ ಆಯೋಗದಿಂದ ವಿಚಾರಣೆ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಪ್ರತೀಕಾರದ, ಅನೈತಿಕ, ತಾಂತ್ರಿಕವಾಗಿ ಸರಿಯಲ್ಲದ ಕ್ರಮವಾಗಿದ್ದು, ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತದೆ. ದೇಶದ ನಾಗರಿಕ ಸೇವೆಗಳ ಮುಖ್ಯಸ್ಥರ ಮನೆ ಮೇಲೆ ದಾಳಿ ನಡೆಸುವ ಮೂಲಕ ಸಂಸ್ಥೆಯನ್ನು ಅಪಮೌಲ್ಯಗೊಳಿಸುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಈ ಹಿಂದೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಪ್ರಧಾನ ಕಾರ್ಯದರ್ಶಿ ನಿವಾಸದ ಮೇಲೆ ದಾಳಿ ನಡೆಸಿ ಮುಜುಗರವನ್ನುಂಟುಮಾಡಲಾಯಿತು. ಇಂದು ತಮಿಳುನಾಡಿನ ಮುಖ್ಯ ಕಾರ್ಯದರ್ಶಿ ನಿವಾಸದ ಮೇಲೆ ದಾಳಿ ಮಾಡಲಾಗಿದೆ. ಇಂತಹ ಪ್ರತೀಕಾರದ, ಅನೈತಿಕ, ತಾಂತ್ರಿಕವಾಗಿ ಸರಿಯಲ್ಲದ ಕ್ರಮವೇಕೆ, ಇದು ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವುದಿಲ್ಲವೇ ಎಂದು ಮಮತಾ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ ಅವರು, ಯಾಕೆ ಅವರು ಅಮಿತ್ ಶಾ ಮತ್ತು ಇತರರ ಮನೆ ಮೇಲೆ ದಾಳಿ ಮಾಡುವುದಿಲ್ಲ? ಭ್ರಷ್ಚಾಚಾರವನ್ನು ಖಡಾಖಂಡಿತವಾಗಿ ವಿರೋಧಿಸುತ್ತಿರುವುದು ಸರಿಯಾದರೂ ಕೂಡ ದೇಶದ ಅತಿ ಉನ್ನತ ನಾಗರಿಕ ಸೇವೆಗಳ ಮುಖ್ಯಸ್ಥರ ವಿರುದ್ಧ ದಾಳಿ ನಡೆಸುವುದು ಸಂಸ್ಥೆಯನ್ನು ಅಮೌಲ್ಯಗೊಳಿಸಿದಂತಾಗುತ್ತದೆ ಎಂದು ಟೀಕಿಸಿದ್ದಾರೆ.