ನಗದು ರಹಿತ ವಹಿವಾಟು (ಸಾಂಕೇತಿಕ ಚಿತ್ರ)
ಅಹಮದಾಬಾದ್: ನೋಟು ನಿಷೇಧ ಕ್ರಮದ ಬಳಿಕ ನಗದು ರಹಿತ ವಹಿವಾಟಿಗೆ ವ್ಯಾಪಕವಾಗಿ ಉತ್ತೇಜನ ಸಿಗುತ್ತಿದ್ದು, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರೂ ಸಹ ನಗದು ರಹಿತ ವಹಿವಾಟು ನಡೆಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಗುಜರಾತ್ ನಲ್ಲಿ ಅಕ್ರಮ ಮದ್ಯ ಮಾರಾಟ, ತಯಾರಕರೂ ಸಹ ತಮ್ಮ ವ್ಯವಹಾರಕ್ಕೆ ನಗದು ರಹಿತ ವಹಿವಾಟು ನಡೆಸುತ್ತಿದ್ದ ಪ್ರಕರಣ ಬಯಲಿಗೆ ಬಂದಿದ್ದು, ಅಪರಾಧ ವಿಭಾಗದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬಂಧನಕ್ಕೊಳಗಾದ ನಾಲ್ವರ ಪೈಕಿ ಇಬ್ಬರು ಅಕ್ರಮ ಮದ್ಯವನ್ನು ಮನೆ ಬಾಗಿಲಿಗೇ ತಲುಪಿಸುತ್ತಿದ್ದರು.
ಅಕ್ರಮ ಮದ್ಯ ಮಾರಾಟ, ತಯಾರಿಕೆಯಲ್ಲಿ ತೊಡಗಿದ್ದವರ ಮೇಲೆ ನಿಗಾ ಇರಿಸಿದ್ದ ಅಹಮದಾಬಾದ್ ಪೊಲೀಸರು ಕೊನೆಗೂ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧನದ ನಂತರ ಆರೋಪಿಗಳು ಕ್ಯಾಶ್ ಲೆಸ್ ವಹಿವಾಟು ನಡೆಸುತ್ತಿದ್ದದ್ದು ಬಹಿರಂಗವಾಗಿದೆ.
ಬಂಧಿತರಿಂದ 66,100 ರೂ ಮೌಲ್ಯದ ಭಾರತೀಯ ತಯಾರಿಕೆಯ ವಿದೇಶಿ ಮದ್ಯ (ಐಎಂಎಫ್‌ಎಲ್)ದ 57 ಬಾಟಲ್ ಹಾಗೂ 6,400 ರೂ ಮೌಲ್ಯದ 64 ಬಿಯರ್ ಕ್ಯಾನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮದ್ಯ ಮಾರಾಟಕ್ಕಾಗಿ ಬಳಕೆ ಮಾಡಲಾಗುತ್ತಿದ್ದ ಸ್ಕೂಟರ್ ಹಾಗೂ ಕಾರುಗಳನ್ನೂ ಸಹ ಪೊಲೀಸರು ವಶಪಡಿಸಿಕೊಂಡಿದ್ದು, ವಾಟ್ಸ್ ಆಪ್ ಮೂಲಕ ಆರ್ಡರ್ ಸ್ವೀಕರಿಸುತ್ತಿದ್ದರು, ಹಾಗೂ ಅಕ್ರಮ ಮದ್ಯ ಸರಬರಾಜು ಮಾಡುತ್ತಿದ್ದ ಜಾಲ ಡಿಜಿಟಲ್ ಪೇಮೆಂಟ್ ನ್ನು ಬಳಕೆ ಮಾಡಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.