ದೇಶ

ಲೆ.ಗವರ್ನರ್ ನಜೀಬ್ ಜಂಗ್ ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡಿದ್ದಾರೆ: ಅರವಿಂದ ಕೇಜ್ರಿವಾಲ್

Sumana Upadhyaya
ನವದೆಹಲಿ: ದೆಹಲಿ ಸರ್ಕಾರದ ನಿರ್ಗಮಿತ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರ ಅಧಿಕೃತ ನಿವಾಸದಲ್ಲಿ ಅವರನ್ನು ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭೇಟಿ ಮಾಡಿದರು.
ತಮ್ಮ ವೈಯಕ್ತಿಕ ಕಾರಣಗಳಿಂದ ಲೆಫ್ಟಿನೆಂಟ್ ಗವರ್ನರ್ ಅವರು ತಮ್ಮ  ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಅವರನ್ನು ಭೇಟಿ ಮಾಡಿ ಬಂದ ಬಳಿಕ ಕೇಜ್ರಿವಾಲ್ ಸುದ್ದಿಗಾರರಿಗೆ ತಿಳಿಸಿದರು.
ಗವರ್ವರ್ ಅವರ ರಾಜೀನಾಮೆಗೆ ನಿನ್ನೆ ಮುಖ್ಯಮಂತ್ರಿ ಆಶ್ಚರ್ಯ ವ್ಯಕ್ತಪಡಿಸಿದ್ದರು. ಅವರು ನಿನ್ನೆ ಟ್ವೀಟ್ ನಲ್ಲಿ ಜಂಗ್ ಅವರ ರಾಜೀನಾಮೆ ನನಗೆ ಆಶ್ಚರ್ಯವನ್ನುಂಟುಮಾಡಿದೆ. ಅವರ ಮುಂದಿನ ಪಯಣ ಶುಭಕರವಾಗಿರಲಿ ಎಂದು ಹೇಳಿದ್ದರು.
ಆಶ್ಚರ್ಯಕರ ನಡೆಯಲ್ಲಿ ದೆಹಲಿ ರಾಜ್ಯಪಾಲ ಲೆಫ್ಟಿನೆಂಟ್ ನಜೀಬ್ ಜಂಗ್ ನಿನ್ನೆ ತಮ್ಮ  ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ತಮ್ಮ ಮೂರೂವರೆ ವರ್ಷಗಳ ಅಧಿಕಾರಾವಧಿಯಲ್ಲಿ ಆಪ್ ಸರ್ಕಾರದ ಜೊತೆ ಆಗಾಗ ವಾಗ್ವಾದ, ಮನಸ್ತಾಪ, ಆರೋಪಗಳನ್ನು ಮಾಡುತ್ತಾ ಸುದ್ದಿಯಲ್ಲಿದ್ದರು. ನಿನ್ನೆ ಏಕಾಏಕಿ ಯಾವುದೇ ಕಾರಣ ನೀಡದೆ ರಾಜೀನಾಮೆ ನೀಡಿದ್ದು ಕೇಂದ್ರ ಮತ್ತು ದೆಹಲಿ ಸರ್ಕಾರಗಳಿಗೆ ಆಘಾತವನ್ನುಂಟುಮಾಡಿದೆ.
ಜಂಗ್ ಅವರ ಕಚೇರಿಯಿಂದಲೂ ಅವರ ರಾಜೀನಾಮೆಗೆ ಕಾರಣ ತಿಳಿದುಬಂದಿಲ್ಲ. ಮಾಜಿ ಐಎಎಸ್ ಅಧಿಕಾರಿಯಾಗಿರುವ ನಜೀಬ್ ಜಂಗ್ ತಮ್ಮ ಇಷ್ಟದ ಶಿಕ್ಷಣ ಕ್ಷೇತ್ರಕ್ಕೆ ಮರಳಿ ಹೋಗಲಿದ್ದಾರೆ ಎಂದು ಹೇಳಿದೆ.
ಕ್ರಿಸ್ ಮಸ್ ರಜೆಗೆ ತಾವು ಗೋವಾಕ್ಕೆ ತೆರಳಲಿದ್ದು ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮೆಹ್ರಿಶಿ ಅವರನ್ನು ಭೇಟಿ ಮಾಡುವುದಾಗಿ ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರಕ್ಕೆ ನಜೀಬ್ ಜಂಗ್ ಪತ್ರ ಬರೆದಿದ್ದರು. ಇದೀಗ ದಿಢೀರನೆ ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ನೀಡಿರುವುದು ಹಲವು ರಾಜಕೀಯ ಪಕ್ಷಗಳಿಗೆ ಆಘಾತವನ್ನುಂಟುಮಾಡಿದೆ.
ಜಂಗ್ ಅವರ ರಾಜೀನಾಮೆ ಸದರದ ನಿರ್ಗಮನವಾಗಿದ್ದು ಈ ಬಗ್ಗೆ ಕೇಂದ್ರ ಸರ್ಕಾರ ಕಾರಣ ನೀಡಬೇಕೆಂದು ಕಾಂಗ್ರೆಸ್ ನ ದೆಹಲಿ ಮುಖ್ಯಸ್ಥ ಅಜಯ್ ಮಕೇನ್ ಒತ್ತಾಯಿಸಿದ್ದಾರೆ.
ಬಿಜೆಪಿ ಮತ್ತು ಆಪ್ ಮಧ್ಯ ಒಪ್ಪಂದವಾಗಿದ್ದು ಇದರಿಂದ ರಾಜ್ಯಪಾಲರು ನಿರ್ಗಮಿಸುವಂತಾಗಿದೆ. ಕೇಂದ್ರ ಸರ್ಕಾರ ಈ ವಿಷಯದಲ್ಲಿ ತನ್ನ  ಪಾರದರ್ಶಕತೆಯನ್ನು ಸಾಬೀತುಪಡಿಸಬೇಕೆಂದು ಹೇಳಿದ್ದಾರೆ.
SCROLL FOR NEXT