ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನದ ನಿರಾಶ್ರಿತರಿಗೆ ಜಮ್ಮು-ಕಾಶ್ಮೀರ ಸರ್ಕಾರ ಸ್ಥಳೀಯ ಜನಸಂಖ್ಯೆಯ ಪ್ರಮಾಣ ಪತ್ರ ನೀಡುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಪ್ರತ್ಯೇಕತಾವಾದಿ ಯಾಸೀನ್ ಮಲೀಕ್ ನನ್ನು ಡಿ.23 ರಂದು ಬಂಧಿಸಲಾಗಿದೆ.
ಜಮ್ಮು-ಕಾಶ್ಮೀರ ಲಿಬರೇಷನ್ ಫ್ರಂಟ್ ಮುಖ್ಯಸ್ಥನಾಗಿರುವ ಯಾಸೀನ್ ಮಲೀಕ್, ಪಾಕ್ ನಿರಾಶ್ರಿತರಿಗೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕು ನೀಡುವ ಪ್ರಮಾಣ ಪತ್ರ ನೀಡುವುದನ್ನು ವಿರೋಧಿಸಿ ಜಮ್ಮು-ಕಾಶ್ಮೀರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಬಂಧಿಸಲಾಗಿದೆ. ಆದರೆ ಜಮ್ಮು-ಕಾಶ್ಮೀರ ಸರ್ಕಾರ ಪಾಕ್ ನಿರಾಶ್ರಿತರಿಗೆ ಪ್ರಮಾಣ ಪತ್ರ ನೀಡುವ ಪ್ರಸ್ತಾವನೆಯ ವಿಚಾರವನ್ನು ಅಲ್ಲಗಳೆದಿದ್ದು, ಅಂತಹ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟನೆ ನೀಡಿದೆ.
1947, 1965, 1971 ರ ಯುದ್ಧದ ನಂತರ ಪಾಕಿಸ್ತಾನದಿಂದ ಬಂದಿರುವ ಹಲವು ನಿರಾಶ್ರಿತರು ಜಮ್ಮು-ಕಾಶ್ಮೀರದಲ್ಲೇ ಆಶ್ರಯ ಪಡೆದಿದ್ದು, ಮೂರು ತಲೆಮಾರುಗಳಿಂದ ರಾಜ್ಯದಲ್ಲೇ ಆಶ್ರಯ ಪಡೆದಿದ್ದಾರೆ. ಸರ್ಕಾರಿ ಕೆಲಸಗಳಿಗೆ ಅರ್ಜಿಸಲ್ಲಿಸಲು ಅವಕಾಶವಿಲ್ಲವಾದರೂ ಲೋಕಸಭಾ ಚುನಾವಣೆಗೆ ಮತ ಚಲಾವಣೆ ಮಾಡುವ ಹಕ್ಕು ಹೊಂದಿದ್ದಾರೆ.